ಚಿಕ್ಕಮಗಳೂರು: ಜಾನಪದ, ಭಾರತೀಯ ಸಂಸ್ಕೃತಿಯ ಮೂಲ ಬೇರು ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಶೃಂಗೇರಿ ತಾಲೂಕಿನ ಬಾಕುರ್ಡಿ ಮೋಹನ ಭಟ್ಟರಗದ್ದೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ನಿನ್ನೆ ಏರ್ಪಡಿಸಿದ್ದ ಕೆಸರುಗದ್ದೆಓಟ, ಹಗ್ಗ ಜಗ್ಗಾಟ ಮತ್ತು ನೀರು ತುಂಬುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಜಾನಪದವನ್ನು ಮರೆತರೆ ನಾವು ನಮ್ಮತನವನ್ನು ಕಳೆದುಕೊಂಡಂತೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಜಾನಪದ ಅನಿವಾರ್ಯವಾಗಿದ್ದು, ಶಾಲಾ, ಕಾಲೇಜುಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಮನರಂಜನೆಯ ಜೊತೆಗೆ ದೈಹಿಕ ವ್ಯಾಯಾಮವನ್ನು ನೀಡುತ್ತವೆ ಎಂದರು.
ಆಧುನಿಕತೆಯಿಂದಾಗಿ ಕಣ್ಮರೆಯಾಗಿರುವ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ನಡೆಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಜಾ.ಪ ತಾಲೂಕು ಅಧ್ಯಕ್ಷೆ ಕೌಸ್ತುಭಾ ಭಟ್, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ದೈಹಿಕ ಶಿಕ್ಷಕ ಅಶೋಕ್ ಸ್ಪರ್ಧೆಗಳನ್ನು ನಿರ್ವಹಿಸಿದರು. ಕೂತಗೋಡು ಗ್ರಾ.ಪಂ. ಅಧ್ಯಕ್ಷ ಕೆ.ಬಿ.ನಾಗೇಶ್, ಸದಸ್ಯ ಎಸ್.ಪಿ.ರಮೇಶ್, ಬೆಟ್ಟಗೆರೆ ಪಿಎಸಿಎಸ್ ಅಧ್ಯಕ್ಷ ಕೆ.ಎಂ.ರಮೇಶ್ ಭಟ್, ಅಣ್ಣಪ್ಪಗೌಡ, ಗೋಚುವಲ್ಲಿ ಅನಂತಯ್ಯ, ನಂದಕಿಶೋರ್, ಐಶ್ವರ್ಯ, ಪ್ರಣತಿ ಉಪಸ್ಥಿತರಿದ್ದರು.










