ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ವಿಧಿವಶ…

55
firstsuddi

ರಾಂಚಿ: ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಅವರು ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಈ  ಕುರಿತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಾಹಿತಿ ನೀಡಿದ್ದಾರೆ.

ಮಹತೋ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಸೆಪ್ಟೆಂಬರ್ 2020ರಲ್ಲಿ ಮಹತೋ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅದರಿಂದ ಅವರ ಶ್ವಾಸಕೋಶ ಸಂಪೂರ್ಣವಾಗಿ ಹಾಳಾಗಿತ್ತು. ಅವರನ್ನು 21 ದಿನಗಳ ಕಾಲ ಲೈಫ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು. ಇದಾದ ಬಳಿಕ ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಮಾರ್ಚ್ 14 ರಂದು ಮಹತೋ ಅವರ ಅನಾರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ರಾಂಚಿಯ ಪರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಅವರನ್ನು ಚೆನ್ನೈಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.

ಮಹತೋ ಅವರು 2019ರಲ್ಲಿ ದುಮ್ರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅವರು ಹಲವಾರು ಬಾರಿ ಜಾರ್ಖಂಡ್ ವಿಧಾನಸಭೆ ಸದಸ್ಯರಾಗಿದ್ದರು.