ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ನಿರಾಕರಿಸಿದೆ. ಇವರೊಂದಿಗೆ ಆರೋಪಿಗಳಾದ ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರಿಗೂ ಜಾಮೀನು ನಿರಾಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ದಿನೇಶ್ ಕುಮಾರ್ ಶರ್ಮಾ ಈ ಮೂವರು ಆರೋಪಿಗಳು ನ್ಯಾಯಾಲಯ ವಿಧಿಸಿದ ಎರಡು ಷರತ್ತುಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶಮಾಡಬಹುದು ಎಂದು ಹೇಳಿದ್ದಾರೆ.
ನಾಲ್ಕು ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಡಿ 2022ರ ಮೇ 30ರಂದು ಸತ್ಯೇಂದರ್ ಜೈನ್ ಅವರನ್ನು ಬಂಧಿಸಲಾಯಿತು. ನವೆಂಬರ್ 17ರಲ್ಲಿ ವಿಚಾರಣಾ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬಳಿಕ ಸತ್ಯೇಂದರ್ ಜೈನ್ ಹೈಕೋರ್ಟ್ ಮೊರೆ ಹೋಗಿದ್ದರು. ಮಾರ್ಚ್ 21 ರಂದು ಇಡಿ ಮತ್ತು ಸತ್ಯೇಂದ್ರ ಜೈನ್ ಅವರ ವಾದವನ್ನು ಆಲಿಸಿದ ಹೈಕೋರ್ಟ್ ತೀರ್ಪನ್ನು ಏಪ್ರಿಲ್ 6ಕ್ಕೆ ಕಾಯ್ದಿರಿಸಿತ್ತು.










