ಮುಂಬೈ: ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಸಿನಿ ತಾರೆ ಸಪ್ನಾ ಗಿಲ್ ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಫೆ.15ರ ರಾತ್ರಿ ಪೃಥ್ವಿ ಶಾ ಮುಂಬೈನ ಸಾಂತ್ರಾಕ್ರೂಜ್ ನಲ್ಲಿರುವ ಪಂಚತಾರಾ ಹೋಟೆಲ್ ಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಸಪ್ನಾ ಗಿಲ್ ಮತ್ತು ಅವರ ತಂಡ ಪೃಥ್ವಿ ಶಾ ಅವರೊಂದಿಗೆ ಸೆಲ್ಫಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಪೃಥ್ವಿ ಶಾ ಇಬ್ಬರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಆದರೆ ಅದೇ ಗುಂಪಿನ ಯುವಕರು ಮತ್ತೆ ಬಂದು ಸೆಲ್ಫಿ ಕೇಳಿದ್ದಾರೆ. ಈ ಹಂತದಲ್ಲಿ ಸೆಲ್ಫಿ ತೆಗಿಸಿಕೊಳ್ಳಲು ಶಾ ನಿರಾಕರಿಸಿದ್ದು, ನಾನು ಸ್ನೇಹಿತರೊಂದಿಗೆ ಊಟಕ್ಕೆ ಬಂದಿದ್ದೇನೆ. ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೂ ಸೆಲ್ಫಿಗೆ ಒತ್ತಾಯಿಸಿದ್ದರಿಂದ ಹೋಟೆಲ್ ವ್ಯವಸ್ಥಾಪಕರಿಗೆ ಪೃಥಿ ಶಾ ತಿಳಿಸಿದ್ದರು. ಬಳಿಕ ಹೋಟೆಲ್ ನವರು ಆ ಗುಂಪನ್ನು ಹೊರಗೆ ಕಳಿಸಿದ್ದರು.
ಇದರಿಂದ ಕೆರಳಿದ ಆ ಗುಂಪು, ಅವರು ಊಟ ಮುಗಿಸಿ ಹೊರಗೆ ಬರುತ್ತಿದ್ದಂತೆ ಬೇಸ್ ಬಾಲ್ ಬ್ಯಾಟ್ ಗಳಿಂದ ಬಿಎಂಡಬ್ಲ್ಯೂ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದರು. ಕಾರಿನ ಹಿಂಭಾಗ, ಮುಂಭಾಗದ ಗಾಜುಗಳನ್ನು ಪುಡಿಪುಡಿ ಮಾಡಿದ್ದರು. ಅಷ್ಟೇ ಅಲ್ಲ, ಪೃಥ್ವಿ ಸ್ನೇಹಿತನಿಂದ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಷ್ಟರಲ್ಲಿ ಪೃಥ್ವಿ ಶಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಲಾಗಿತ್ತು. ಘಟನೆ ಸಂಬಂಧ ಓಶಿವಾರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.