ಡಿಕೆಶಿ ಪುಣ್ಯಸ್ನಾನದಿಂದ ಎಷ್ಟು ಪಾಪ ಕಳೆಯಿತು ಅಂತ ಖರ್ಗೆ ವರದಿ ಪಡೆಯಬೇಕು: ಯತ್ನಾಳ್ ವ್ಯಂಗ್ಯ.

39

ನವದೆಹಲಿ: ಮಹಾ ಕುಂಭಮೇಳದಲ್ಲಿ ಡಿ.ಕೆ ಶಿವಕುಮಾರ್ ಪುಣ್ಯಸ್ನಾನ ಮಾಡಿದ್ದಾರೆ. ಇದರಿಂದ ಅವರ ಎಷ್ಟು ಪಾಪ ಕಳೀತು ಅಂತ ಖರ್ಗೆ ವರದಿ ಪಡೆಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯ ಮಾಡಿದರು. ನಿನ್ನೆಯಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್ ಮಹಾ ಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡಿ, ಅವರವರ ವೈಯಕ್ತಿಕ ಭಕ್ತಿಯ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅವರು ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಎಷ್ಟು ಪಾಪ ಕಳೆದು ಹೋಯಿತು ಎಂದು ಮಲ್ಲಿಕಾರ್ಜುನ ಖರ್ಗೆ ವರದಿ ಪಡೆಯಬೇಕು. ಹಿಂದೂಗಳೇ ವೋಟ್ ಹಾಕೋದು, ಕಡೆಗೆ ಮುಸ್ಲಿಮರಿಂದ ಗೆದ್ದೆವು ಅಂತ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು, ಗಂಗೆಯಲ್ಲಿ ಮುಳುಗೋದ್ರಿಂದ ಬಡತನ ಹೋಗಲ್ಲ, ಹೊಟ್ಟೆ ತುಂಬಲ್ಲ ಎಂದು ಹೇಳಿದ್ದರು. ಈಗ ಡಿಕೆಶಿ ಅವರ ಎಷ್ಟು ಪಾಪ ಕಳೆಯಿತು ಎಂದು ಖರ್ಗೆ ವರದಿ ಪಡೆಯಬೇಕು ಎಂದು ಲೇವಡಿ ಮಾಡಿದರು. ಯತ್ನಾಳ್ ಟೀಂ ದೆಹಲಿಗೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿ, ನಾವು ದೆಹಲಿಗೆ ಸೋಮಣ್ಣ ಮನೆ ಪೂಜೆ ಸಲುವಾಗಿ ಬಂದಿದ್ದೇವೆ. ಮುಂದೆ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಎಲ್ಲರಿಗೂ ಬನ್ನಿ ಎಂದು ಆಹ್ವಾನ ನೀಡಿದ್ದರು ಹಾಗಾಗಿ ಬಂದಿದ್ದೇವೆ. ಸೋಮಣ್ಣನವರು ನಮಗೆ ಆತ್ಮೀಯರಿದ್ದಾರೆ. ರೈಲ್ವೇ ಮಂತ್ರಿಗಳಾದ ಮೇಲೆ ನಮ್ಮ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.