ಡಿಕೆ ಬ್ರದರ್ಸ್‍ಗೆ ಇಡಿ ನೋಟಿಸ್ ; ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ…

63
firstsuddi

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಅ.7ರಂದು(ನಾಳೆ) ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ.

ಇಡಿಯಿಂದ ಡಿ.ಕೆ ಶಿವಕುಮಾರ್ ಗೆ ಸಮನ್ಸ್ ಬಂದಿದ್ದು, ನಾಳೆ ದೆಹಲಿಗೆ ವಿಚಾರಣೆಗೆ ಬರಲೇಬೇಕು ಎಂದು ಸಮನ್ಸ್ ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿರುವ ಕಾರಣದಿಂದಾಗಿ ವಿಚಾರಣೆಗೆ ಬೇರೆ ದಿನಾಂಕ ನಿಗದಿ ಮಾಡುವಂತೆ ಇಮೇಲ್ ಮೂಲಕ ಡಿಕೆ ಬ್ರದರ್ಸ್ ಇಡಿಗೆ ಮನವಿ ಮಾಡಿದ್ದಾರೆ. ಡಿ.ಕೆ.ಸಹೋದರರ ಮನವಿಗೆ ಇಡಿಯಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ. ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ಸಂದೇಶವು ಬಂದಿಲ್ಲ.

ಇಡಿ ಸಮನ್ಸ್ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ನಾನು ಭಾರತ್ ಜೋಡೋ ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದೇನೆ. ನಾಳೆ ವಿಚಾರಣೆಗೆ ಬರುವುದಕ್ಕೆ ಆಗಲ್ಲ ಅಂತ ಕೇಳಿಕೊಂಡಿದ್ದೆ. ಇಡಿಯವರು ಒಪ್ಪಿಕೊಳ್ಳದೆ ನಾಳೆ ಬರಲೇಬೇಕೆಂದು ಸಮನ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ನಾಯಕರು ಹೋಗು ಅಂದ್ರೆ ಹೋಗುತ್ತೇನೆ. ಬೇಡ ಅಂದ್ರೆ ಬಿಡ್ತೇನೆ ಎಂದರು.