ಚಿಕ್ಕಮಗಳೂರು:- ತಲಾತಲಾಂತರದಿಂದ ಜನರ ಬಾಯಿಂದ ಬಾಯಿಗೆ ಹರಿದು ಬರುವ ಮೂಲಕ ಜಾನಪದ ಇಂದಿಗೂ ಉಳಿದಿದೆ ಎಂದು ತರೀಕೆರೆ ಶಾಸಕ ಜಿಹೆಚ್ ಶ್ರೀನಿವಾಸ್ ಹೇಳಿದರು.
ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ನಿನ್ನೆ ಕರ್ನಾಟಕ ಜಾನಪದ ಪರಿಷತ್ತಿನಿಂದ ನಡೆದ ತಾಲೂಕು ದ್ವಿತೀಯ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಾನಪದರು ಅನಕ್ಷರಸ್ಥರು ತಮ್ಮ ಶ್ರಮದ ಬದುಕಿನ ನಡುವೆ ಜಾನಪದವನ್ನು ಕಟ್ಟಿ ಬೆಳೆಸಿದ್ದಾರೆ. ಜಾನಪದ ಕಲೆ ಮತ್ತು ಸಾಹಿತ್ಯದಲ್ಲಿ ನಮ್ಮ ಸಂಸ್ಕೃತಿ ಅಡಗಿದೆ ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಮಹತ್ತರವಾದ ಹೊಣೆಗಾರಿಕೆ ಯುವಜನತೆಯ ಮೇಲಿದೆ ಎಂದರು.
ಜಾನಪದ ಪರಿಕರಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಚಂದ್ರಶೇಖರ್ ಜಾನಪದ, ಕಲೆ ಮಾತ್ರವಲ್ಲ ಅದು ಬಹುದೊಡ್ಡ ಜ್ಞಾನ ಸಂಪತ್ತು ಜಾನಪದವನ್ನು ಮೈಗೂಡಿಸಿಕೊಂಡರೆ ಸುಸಂಸ್ಕೃತ ಸಭ್ಯ ಸಮಾಜದ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಜಾನಪದ ತಜ್ಞ ಪ್ರೊ.ಬಸವರಾಜ ನೆಲ್ಲೀ ಸರ ಮಾತನಾಡಿ 1967 ರಲ್ಲಿ ತರೀಕೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಪ್ರಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಹೊನ್ನ ಬಿತ್ತೇವು ಹೊಲಕೆಲ್ಲ ಅಕರ ಗ್ರಂಥದ ಪುನರ್ ಮುದ್ರಣ ಮಾಡಬೇಕು ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜುನ ರಾವ್ ಜಾದವ್ ಮಾತನಾಡಿ ತಮ್ಮ ಹುಟ್ಟೂರು ಲಕ್ಕವಳ್ಳಿಯಲ್ಲಿ ತಮ್ಮ ಸರ್ವಾಧ್ಯಕ್ಷತೆಯಲ್ಲಿ ಜಾನಪದ ಸಮ್ಮೇಳನ ನಡೆಯುತ್ತಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದರು.
ಆಶಯ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಜಾನಪದ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವಿವಿಧ ಜಾನಪದ ಕಲಾತಂಡಗಳ ನಡುವೆ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ನಿವೃತ್ತ ಶಿಕ್ಷಕ ಹೊರಕೇರಪ್ಪ ರಾಷ್ಟ್ರಧ್ವಜ ಕೆ ಪಾಂಡುರಂಗ ನಾಡದ್ವಜ ಕಜಾಪ ಗೌರವಾಧ್ಯಕ್ಷ ಸೂರ್ಯವಂಶಿ ಜಾನಪದ ಧ್ವಜಾರೋಹಣವನ್ನು ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ವಿಶ್ವನಾಥ್ ಕಜಾಪ ಅಧ್ಯಕ್ಷ ಆರ್ ನಾಗೇಶ್ ತಾಪಂ ಮಾಜಿ ಅಧ್ಯಕ್ಷ ಅನ್ಬು ಮಾಜಿ ಸದಸ್ಯ ಸೀತಾರಾಮ್ ವೇಲಾಯುದನ್ ಎಲ್ ಟಿ ಹೇಮಣ್ಣ ನಂದಕುಮಾರ್ ಹೆಚ್ ಎನ್ ಮಂಜುನಾಥ್ ಪಣಿರಾಜ್ ಜೈನ್ ತಿಪ್ಪೇಶಪ್ಪ ತಾಲೂಕು ಕಸಾಪ ಅಧ್ಯಕ್ಷ ನವೀನ್ ಬಿಎಸ್ ಭಗವಾನ್ ಉಪಸ್ಥಿತರಿದ್ದರು.