ಮುಂಬೈ : ತಾವೇ ನಿರ್ಮಿಸಿದ ಹೆಲಿಕಾಪ್ಟರ್ ಟ್ರಯಲ್ ರನ್ ನೋಡುವ ವೇಳೆ ಅದರ ಬ್ಲೇಡ್ ಗಂಟಲಿಗೆ ತಗುಲಿ 24 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆ ಆಗಸ್ಟ್ 10 ರಂದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ನಡೆದಿದ್ದು, ಮಹಾರಾಷ್ಟ್ರದ ಮಹಾಗಾಂವ್ ತಾಲ್ಲೂಕಿನ ಪುಲ್ಸವಾಂಗಿ ಗ್ರಾಮದ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ ಮೃತ ಯುವಕ.
8ನೇ ತರಗತಿಯಲ್ಲಿದ್ದಾಗಲೇ ಶಾಲೆ ಬಿಟ್ಟು ಮೆಕ್ಯಾನಿಕ್ ಆಗಿ ಸ್ಟಿಲ್ ಪೈಪ್ ಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದ ಶೇಖ್ ಇಸ್ಮಾಯಿಲ್ ಸಿಂಗಲ್ ಸೀಟ್ ಇರುವ ಹೆಲಿಕಾಪ್ಟರ್ ಮೂಲ ಮಾದರಿಯೊಂದನ್ನು ನಿರ್ಮಿಸಿದ್ದರು. ಆದರೆ ಹೆಲಿಕಾಪ್ಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷಿಸುತ್ತಿದ್ದ ವೇಳೆ ಬ್ಲೇಡ್ ತಗುಲಿ ಅವರ ಗಂಟಲು ಕಟ್ ಆಗಿದೆ. ಗಾಯಗೊಂಡ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಇಸ್ಮಾಯಿಲ್ ಶೇಖ್ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಮೃತ ವ್ಯಕ್ತಿ 2 ವರ್ಷಗಳ ಹಿಂದೆ ಈ ಹೆಲಿಕಾಪ್ಟರ್ ನನ್ನು ನಿರ್ಮಿಸಿದ್ದರು. ಅಲ್ಲದೇ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಸಾರ್ವಜನಿಕವಾಗಿ ಹೆಲಿಕಾಪ್ಟರ್ನನ್ನು ಅನಾವರಣಗೊಳಿಸುವ ಯೋಜನೆ ಹೊಂದಿದ್ದರು ಎಂದು ತಿಳಿಸಿದ್ದಾರೆ.
ಇಸ್ಮಾಯಿಲ್ ಅವರ ಸಹೋದರ ಮತ್ತು ಮೂವರು ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸದ್ಯ ಹೆಲಿಕಾಪ್ಟರ್ ನನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ.










