ಮೈಸೂರು : ಹೋಟೆಲ್‍ಗೆ ತಿಂಡಿ ತಿನ್ನಲು ಬಂದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹುಣಸೂರು ತಾಲೂಕಿನ ನಂಜಪುರ ಗ್ರಾಮದ ನಿವಾಸಿ ನಿತಿನ್ ಕುಮಾರ್(25)ಸಾವನ್ನಪ್ಪಿದ ವಿದ್ಯಾರ್ಥಿ. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಿತಿನ್ ಕುಮಾರ್ ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದರು.
ಸ್ನೇಹಿತನ ಜೊತೆ ತಿಂಡಿ ತಿನ್ನಲು ಹುಣಸೂರು ಪಟ್ಟಣ ಹೋಟೆಲ್ ಗೆ ಹೋಗಿದ್ದರು. ತಿಂಡಿಗೆ ಆರ್ಡರ್ ಮಾಡಿ ಸ್ನೇಹಿತನ ಜೊತೆ ಮಾತನಾಡುತ್ತಿರುವಾಗಲೇ ಟೇಬಲ್ ನಲ್ಲಿ ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ನೇಹಿತ ಹಾಗೂ ಹೋಟೆಲ್ ನವರು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲೇ ನಿತಿನ್ ಸಾವನ್ನಪ್ಪಿದ್ದಾನೆ. ನಿತಿನ್ ಸಾವನ್ನಪ್ಪುತ್ತಿರುವ ಕೊನೆಯ ಕ್ಷಣದ ದೃಶ್ಯ ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










