ತುಮಕೂರು : ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಹೇಮಾವತಿ(17) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಈಕೆ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ರಾತ್ರಿ ಕೊಠಡಿಯೊಳಗೆ ವ್ಯಾಸಂಗ ಮಾಡಲು ಹೋದವಳು ಬೆಳಗ್ಗೆ 8 ಗಂಟೆಯಾದ್ರೂ ಹೊರಗೆ ಬಾರದ ಹಿನ್ನೆಲೆ ಒಳಗೆ ಹೋಗಿ ನೋಡಿದಾಗ ಆಕೆ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮತ್ತೊಂದೆಡೆ ವ್ಯಕ್ತಿಯೊಬ್ಬ ಸಾಲಕ್ಕೆ ಹೆದರಿ ತನ್ನ ಜಮೀನಿನಲ್ಲಿರುವ ಗುಡಿಸಿಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿ ಎಸ್ ದುರ್ಗ ಹೋಬಳಿಯ ಮುದ್ದಯ್ಯನಪಾಳ್ಯದ ಮರಿಯಣ್ಣನ ಮಗ ದಾಸೇಗೌಡ(29) ಮೃತ ದುರ್ದೈವಿ. ಮೃತ ದಾಸೇಗೌಡ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇತ್ತೀಚೆಗೆ ಕೈಸಾಲ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ತನ್ನ ಜಮೀನಿನ ಗುಡಿಸಲಿನಲ್ಲಿ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನೊಂದೆಡೆ ಅನೇಕ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಗುಣಮುಖವಾಗದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಂಬಾಡಿ ಗ್ರಾಮದ ಸತ್ಯನಾರಾಯಣಶೆಟ್ಟಿ ಅವರ ಪತ್ನಿ ತ್ರೈಜತಿ (40) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಮೂರು ಪ್ರಕರಣಗಳು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










