ಹಾಸನ: ತೋಟದಲ್ಲಿ ಕಾಯಿ ಆಯುವಾಗ ತೆಂಗಿನಕಾಯಿ ಗೊನೆ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬಿ.ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಜ್ವಲ್ (16) ಮೃತಪಟ್ಟ ಬಾಲಕನಾಗಿದ್ದು, ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.
ಶ್ರವಣಬೆಳಗೊಳ ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಮಗ ಪ್ರಜ್ವಲ್‍ನೊಂದಿಗೆ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಪ್ರಜ್ವಲ್ ಪ್ರತಿನಿತ್ಯ ತೋಟಕ್ಕೆ ಹೋಗಿ ಕಾಯಿ ಎತ್ತಿ ಹಾಕಿ ಇತರೆ ಸಣ್ಣಪುಟ್ಟ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಗಾಳಿ, ಮಳೆಗೆ ಬಿದ್ದಿದ್ದ ಕಾಯಿಗಳನ್ನು ಒಂದೆಡೆ ಸಂಗ್ರಹಿಸುವಾಗ ಏಕಾಏಕಿ ಮರದಿಂದ ಕಾಯಿ ಗೊನೆ ಬಾಲಕನ ಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










