ಸ್ಯಾಂಡಲ್ ವುಡ್ ಬಾಕ್ಸಾಫಿಸ್ ಸುಲ್ತಾನ್ ಗೆ ರಸ್ತೆ ಅಪಘಾತವಾಗಿದೆ. ನಟ ದರ್ಶನ್ ಅವರಿಗೆ ಅಪಘಾತದಲ್ಲಿ ಕೈ ಮುರಿದಿದೆ. ಇದರ ಜೊತೆಗೆ ಹಿರಿಯ ನಟ ದೇವರಾಜ್ ಹಾಗು ನಟ ಪ್ರಜ್ವಲ್ ದೇವರಾಜ್ ಅವರಿಗೂ ಪೆಟ್ಟಾಗಿದೆ. ಅಂದಹಾಗೆ, ಈ ಅಪಘಾತ ಹೇಗೆ ನಡೀತು? ಅವಘಡದ ಬಳಿಕ ಏನೆಲ್ಲಾ ಆಯ್ತು ಎಲ್ಲಾ ಮಾಹಿತಿ ಇಲ್ಲಿದೆ ನೋಡಿ…
ಸಮಯ: ಬೆಳಗ್ಗೆ 3 ಗಂಟೆ
ನಟ ದರ್ಶನ್ ಅವರು ನಿನ್ನೆ ಮೈಸೂರಿಗೆ ಆಗಮಿಸಿದ್ರು. ಇವರ ಜೊತೆಗೆ ಹಿರಿಯ ನಟ ದೇವರಾಜ್, ನಟ ಪ್ರಜ್ವಲ್ ದೇವರಾಜ್ ಸೇರಿ ಹಲವರು ಆಗಮಿಸಿದ್ರು. ನಿನ್ನೆ ಬೆಳಗ್ಗೆ ಮೃಗಾಲಯಕ್ಕೆ ಭೇಟಿ ನೀಡಿದ್ರು. ನಂತರ ಅರಮನೆಯಲ್ಲಿ ಕಾವಾಡಿ, ಮಾವುತರ ಜೊತೆ ಊಟ ಮಾಡಿದ್ರು. ಆನೆಗಳ ಜೊತೆ ಫೋಸ್ ಕೊಟ್ಟಿದ್ರು. ಇದಾದ ಬಳಿಕ ಮೈಸೂರು ಹೊರವಲಯದ ಹೋಟೆಲ್ ನಲ್ಲಿ ಬೀಡುಬಿಟ್ಟಿದ್ರು. ಬೆಳಗಿನ ಸಂದರ್ಭದಲ್ಲಿ ಬೆಂಗಳೂರಿಗೆ ತೆರಳಿದರೆ ಟ್ರಾಫಿಕ್ ಸಿಕ್ಕಿಹಾಕಿಕೊಳ್ತೀವಿ. ಜೊತೆಗೆ ಅಭಿಮಾನಿಗಳು ಸುತ್ತುವರಿದರೆ ಚಿತ್ರೀಕರಣ ಸ್ಥಳ ತಲುಪಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬೆಳಗಿನ ಜಾವ ಮೂರು ಗಂಟೆಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ, ಕಾರು ಹಿನಕಲ್ ಜಂಕ್ಷನ್ ತಲುಪುತಿದ್ದಂತೆ ಡಿವೈಡರ್ ಗೆ ಡಿಕ್ಕಿ ಹೊಡೆದಿತ್ತು.
ಸಮಯ: 3.30
ಜೋರು ಮಳೆಯ ನಡುವೆ ಕೊಂಚ ವೇಗವಾಗಿಯೇ ಹೋಗುತ್ತಿದ್ದ ಕಾರನ್ನ ಸಹ ಕಲಾವಿದ ರಾಯ್ ಆಂಟೋನಿ ಚಲಾಯಿಸುತ್ತಿದ್ದ. ಕಾರು ಅಪಘಾತವಾದ ತಕ್ಷಣ ಕಾರಿನ ಒಳಗಿದ್ದ ದರ್ಶನ್ ಕೈ ಮುರಿದಿದೆ. ದೇವರಾಜು ಬೆರಳುಗಳು ನಜ್ಜಾಗಿವೆ. ಘಟನೆ ನೋಡಿದ ಆಘಾತಕ್ಕೆ ಪ್ರಜ್ವಲ್ ಪ್ರಜ್ಞೆ ತಪ್ಪಿದರೆ , ಆಂಟೋನಿ ಕೈ ಕಾಲಿಗೆ ಪೆಟ್ಟಾಗಿದೆ. ಕೆಎ 51, z 7999 ಕಾರಿನ ಮುಂಭಾಗ ಸಂಫೂರ್ಣ ನಜ್ಜು ಗುಜ್ಜಾಗಿದೆ. ಬೆಳಗಿನ ಜಾವವಾದ ಕಾರಣ ಹೆಚ್ಚಿನ ಜನರು ಇರದ ಹಿನ್ನಲೆ ತಕ್ಷಣ ದರ್ಶನ್ ಹಾಗು ಇತರೆ ಮಂದಿ ಅಲ್ಲಿಂದ ತೆರಳಿದ್ದಾರೆ.
ಸಮಯ: 4
ಘಟನೆ ಬಳಿಕ ದಿಕ್ಕು ತೋಚದಂತಾದ ದರ್ಶನ್ ಅಂಡ್ ಇತರೆ ಕಲಾವಿದರು ಅಪಘಾತ ನಡೆದಿರುವ ವಿಚಾರ ತಿಳಿಸುವುದು ಬೇಡ. ಎಲ್ಲರೂ ಬೆಂಗಳೂರಿಗೆ ತೆರಳೋಣ ಎಂದು ನಿರ್ಧರಿಸಿ ಶ್ರೀರಂಗಪಟ್ಟಣದವರೆಗೆ ತೆರಳಿದ್ದಾರೆ. ಆದರೆ ಅಷ್ಟರಲ್ಲಿ ವಿಷಯ ಕಾಡ್ಗಿಚ್ಚಿನಂತೆ ಹರಿದಾಡಲು ಶುರುವಾಗಿದೆ. ಜೊತೆಗೆ ದರ್ಶನ್ ಹಾಗು ದೇವರಾಜು ಅವರ ಕೈ ನೋವು ಹೆಚ್ಚಾಗಿದೆ. ಆ ವೇಳೆ ದರ್ಶನ್ ಅಪಘಾತವಾದ ಕಾರನ್ನು ಶ್ರೀರಂಗಪಟ್ಟಣದ ಕೈಗಾರಿಕಾ ಪ್ರದೇಶದ ಗೆಳೆಯನ ಗೋಡೋನ್ ಗೆ ಹಾಕಿಸಿ ,ಮತ್ತೊಂದು ಕಾರಿನಲ್ಲಿ ಮೈಸೂರು ರಿಂಗ್ ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಆಗಮಿಸಿದ್ದಾರೆ
ಸಮಯ; ಬೆಳಗ್ಗೆ 5.10
ಸ್ಥಳ; ಕೊಲಂಬಿಯಾ ಏಷಿಯಾ ಆಸ್ಪತ್ರೆ
ಬೆಂಗಳೂರಿನ ಆಸ್ಪತ್ರೆಗೆ ಹೋಗಬೇಕಾ? ಮೈಸೂರಿನ ಬೇರೆ ಆಸ್ಪತ್ರೆಗೆ ಹೋಗಬೇಕಾ ಎಂಬ ಗೊಂದಲದ ನಡುವೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಬಂದಿದ್ದಾರೆ. ತಕ್ಷಣ ಇವರನ್ನ ಕಂಡ ಸಿಬ್ಬಂದಿ ಎಂಎಲ್ ಸಿ ಯಾವುದನ್ನೂ ಮಾಡದೆ ಚಿಕಿತ್ಸೆಗೆ ಒತ್ತು ನೀಡಿದೆ. ಕೈ ನೋವಿನಿಂದ ನರಳಾಡುತ್ತಿದ್ದವರಿಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ
ಸಮಯ; 5.45
ಅಷ್ಟೊತ್ತಿಗೆ ಡಾ.ಅಜಯ್‌ಹೆಗ್ಡೆ ಹಾಗುಡಾ.ವಿಜಯ್ ಆಗಮಿಸಿ ಎಕ್ಸ್ ರೇ, ಸ್ಕ್ಯಾನಿಂಗ್ ಮಾಡಿದ್ದಾರೆ. ಆ ವೇಳೆ ದರ್ಶನ್ ಅವರ ಮುಂಗೈಮುರಿದಿದೆ ಎಂಬ ವಿಚಾರ ತಿಳಿದಿದೆ. ಜೊತೆಗೆ ದೇವರಾಜ್ ಅವರ ಬೆರಳು ನಜ್ಜಾಗಿವೆ ಎಂಬ ಮಾಹಿತಿ ಸಿಕ್ಕಿದೆ. ತಕ್ಷಣ ತಡಮಾಡದೆ ವೈದ್ಯರು ಇಬ್ಬರಿಗೂ ಶಸ್ತ್ರ ಚಿಕಿತ್ಸೆ ಆರಂಭಿಸಿದ್ದಾರೆ
ಸಮಯ; ಬೆಳಗ್ಗೆ 7.20 ನಿಮಿಷ
ದರ್ಶನ್ ಕೈ ಗೆ ಬಳೆ ಚುಚ್ಚಿದರ ಪರಿಣಾಮ ಮುಂಗೈ ಗಾಯವಾಗಿತ್ತು. ಜೊತೆಗೆ ಬಳೆಯಿಂದಾಗಿ ಮೂಳೆ ಮುರಿದಿತ್ತು. ಅದನ್ನ ಸರಿಪಡಿಸಿದ ವೈದ್ಯರು ಬರೋಬ್ಬರಿ 25 ಹೊಲಿಗೆ ಹಾಕಿ, ಪ್ಲೇಟ್ ಹಾಕಿದ್ರು. ಜೊತೆಗೆ ದೇವರಾಜ್ ಅವರಿಗೂ ಚಿಕಿತ್ಸೆ ನೀಡಿದರಲ್ಲದೆ, ಪ್ರಜ್ವಲ್ ಅವರನ್ನ ಅಬ್ಸರ್ವೇಷನ್ ಅಲ್ಲಿ ಇರಿಸಿದ್ರು
ಸಮಯ; ಬೆಳಗ್ಗೆ 7.50
ಅಷ್ಟೊತ್ತಿಗಾಗಲೇ ವಿಷಯ ತಿಳಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪುತ್ರನ ಜೊತೆ ಆಗಮಿಸಿದ್ರು. ದರ್ಶನ್ ತಾಯಿ ಮೀನಾ ಕೂಡ ಆಗಮಿಸಿ ಮಗನ ಯೋಗಕ್ಷೇಮ ವಿಚಾರಿಸಿದ್ರು
ಸಮಯ: 8.10 ನಿಮಿಷ
ನಂತರ ವಿಷಯ ಹರಿದಾಡುತ್ತಿದ್ದಂತೆ ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಇತ್ತ ಪ್ರಕರಣ ಮುಚ್ಚಿಡಲು ಸಾಧ್ಯವಾಗದೆ ವೈದ್ಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ರು. ನಂತರ ಆಗಮಿಸಿದ ಪೊಲೀಸರು ದರ್ಶನ್ ಗನ್ ಮ್ಯಾನ್ ಲಕ್ಷ್ಮಣ್ ನೀಡಿದ ದೂರಿನ ಅನ್ವಯ 168/18 ಕಲಂ ಅಡಿ ಅಪಘಾತದ ದೂರು ದಾಖಲಿಸಿಕೊಂಡ್ರು
ಸಮಯ: ಬೆಳಗ್ಗೆ 9 .15
ವಾಯ್ಸ್: ಇತ್ತ ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆ ವೈದ್ಯ ಉಪೇಂದ್ರ ಶೆಣೈ ಮಾಹಿತಿ ಬಹಿರಂಗಪಡಿಸಿದ್ರು. ಅಪಘಾತ ಬಳಿಕ ಚಿಕಿತ್ಸೆಯ ಬಗ್ಗೆ ವಿವರಣೆ ನೀಡಿದ್ರು
ಅಷ್ಟೊತ್ತಿಗೆ ಪತಿಯನ್ನು ಕಂಡು ಆರೋಗ್ಯ ವಿಚಾರಿಸಿ ಹೊರ ಬಂದ ವಿಜಯಲಕ್ಷ್ಮಿ ಕೂಡ ಆರೋಗ್ಯದ ಬಗ್ಗೆ ಮಾಹಿತಿನೀಡಿದ್ರು
ಸಮಯ: 10.45
ಇತ್ತ ಆಸ್ಪತ್ರೆಗೆ ಸಚಿವ ಸಾ.ರಾ.ಮಹೇಶ್ , ನಟರಾದ ಕೀರ್ತಿ ರಾಜ್, ಧರ್ಮರಾಜ್, ನೆನಪಿರಲಿ ಪ್ರೇಮ್, ಸೃಜನ್ ಸೇರಿ ಹಲವರು ಆಗಮಿಸಿ ದರ್ಶನ್ ಯೋಗಕ್ಷೇಮ ವಿಚಾರಿಸಿದ್ರು
ಸಮಯ: 12 ಗಂಟೆ
ಒಬ್ಬೊಬ್ಬರೇ ಆಗಮಿಸಿ ನಟರ ಆರೋಗ್ಯ ವಿಚಾರಿಸುತ್ತಿದ್ದರೆ, ಇತ್ತ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ನಾಯನನ ಆರೋಗ್ಯ ಏನಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದರು. ಈ ವಿಚಾರ ತಿಳಿದ ದರ್ಶನ್ ಆಡಿಯೋ ಒಂದನ್ನು ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ನೀಡಿ ಅಭಿಮಾನಿಗಳ ಬಳಿ ಮನವಿ ಮಾಡಿದರು
ಸಮಯ; 1.25 ನಿಮಿಷ
ಶಸ್ತ್ರ ಚಿಕಿತ್ಸೆ ಬಳಿಕ ಆರೋಗ್ಯವಾಗಿದ್ದ ದರ್ಶನ್ ಅವರನ್ನ ಐಸಿಯುನಿಂದ ವಿಶೇಷ ವಾರ್ಡ್ ಗೆ ಶಿಫ್ಟ್ ಮಾಡಲಾಯ್ತು. ಅದೇ ರೀತಿ ದೇವರಾಜ್ ಅವರನ್ನ 128 ಹಾಗು ಪ್ರಜ್ವಲ್ ಅವರನ್ನ 129 ರೂಂ ಕೊಠಡಿಗೆ ರವಾನಿಸಿ ವೈದ್ಯರು ಚಿಕಿತ್ಸೆ ಮುಂದುವರಿಸಿದರು
ಸಮಯ: 2.10
ಇದರ ನಡುವೆ ಅಪಘಾತದ ಕಾರು ಪತ್ತೆಗೆ ಪೊಲೀಸರು ಮುಂದಾಗಿದ್ದರು. ಮಾಹಿತಿ ಆಧರಿಸಿ ಶ್ರೀರಂಗಪಟ್ಟಕ್ಕೆ ತೆರಳಿ ವಿವಿ ಪುರಂ ಪೊಲೀಸರು ಕಾರನ್ನು ತಂದರು. ಕಾರಿನ ದಾಖಲಾತಿ, ಇನ್ಶೂರೆನ್ಸ್ ಎಲ್ಲವನ್ನೂ ಪರಿಶೀಲಿಸಿದರು
ಸಮಯ: 4 ಗಂಟೆ…
ಈ ನಡುವೆ ಆಸ್ಪತ್ರೆ ವೈದ್ಯರು ಪ್ರೆಸ್ ನೋಟ್ ಬಿಡುಗಡೆ ಮಾಡಿ ಒಂದೆರಡು ದಿನದಲ್ಲಿ ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ರು
ಒಟ್ಟಾರೆ, ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಪ್ರಕರಣ ಮುಚ್ಚು ಹಾಕಲು ಯತ್ನಿಸಿದ್ದು ಯಾವ ಕಾರಣಕ್ಕೆ? ಕಾರನ್ನು ಬಚ್ಚಿಟ್ಟಿದ್ದರ ಹಿಂದಿನ ರಹಸ್ಯ ಏನು? ಕಾರನ್ನು ಸ್ವತ್ಃ ದರ್ಶನ್ ಚಲಾಯಿಸುತ್ತಿದ್ದರೂ ಬೇರೊಬ್ಬರ ಹೆಸರನ್ನು ಕೊಟ್ಟದ್ದು ಯಾವ ಕಾರಣಕ್ಕೆ ಎಂಬುದು ನಿಗೂಢವಾಗಿದೆ. ಇದರ ನಡುವೆ ಇಡೀ ಪ್ರಕರಣವನ್ನೆ ಮುಚ್ಚಿ ಹಾಕುವ ಯತ್ನ ಮಾಡಿದ ಪೊಲೀಸರ ಮರ್ಮವೇನು ಎಂಬುದು ರಹಸ್ಯವಾಗಿದೆ.









