ದಸರಾ ಜಂಬೂ ಸವಾರಿ ವೈಭವ: 4ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು.

72
firstsuddi

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ದಸರಾ ಮೆರವಣಿಗೆ ಆರಂಭಕ್ಕೂ ಮುನ್ನ ಮೈಸೂರಿನ ಅರಮನೆಯಲ್ಲಿ ಖಾಸಗಿ ದರ್ಬಾರ್ ಭಾಗವಾಗಿ ವಿಜಯಯಾತ್ರೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಅರಮನೆಯ ಕಲ್ಯಾಣ ಮಂಟಪದ ಮುಂಭಾಗ ಜಟ್ಟಿ ಸಮುದಾಯದವರು ಜಟ್ಟಿ ಕಾಳಗ ನಡೆಸಿ ಮಹಾರಾಜರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲಿದ್ದಾರೆ. ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಾ ಯಾತ್ರೆ ನಡೆಸಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1.46ರಿಂದ 2.08ರಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜದ ಪೂಜೆ ನೆರವೇರಲಿದೆ. ನಂತರ ನಾಡಿನ ಕಲೆ ಸಂಸ್ಕೃತಿ, ಪರಂಪರೆಯನ್ನು ಸಾರುವ ಸ್ತಬ್ಧಚಿತ್ರಗಳು, ಕಲಾತಂಡಗಳ ಅದ್ದೂರಿ ಮೆರವಣಿಗೆ ಆರಂಭವಾಗಲಿದೆ. ಸಂಜೆ 4.40ರಿಂದ 5 ಗಂಟೆಯವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ.

ಸತತ ನಾಲ್ಕನೇ ಬಾರಿಗೆ ಅಭಿಮನ್ಯು ಆನೆಯು ತಾಯಿ ಚಾಮುಂಡೇಶ್ವರಿ ವಿಗ್ರಹ ಇರುವ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದು, ಸತತ ಮೂರು ಬಾರಿ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಹ್ಯಾಟ್ರಿಕ್ ಸಾಧಿಸಿರುವ ಅಭಿಮನ್ಯು ಆನೆ ಈಗ 4ನೇ ಬಾರಿಗೆ ಅಂಬಾರಿ ಹೊರಲು ಸರ್ವ ಸನ್ನದ್ಧವಾಗಿದೆ. ಈ ಬಾರಿ ಅಭಿಮನ್ಯು ಆನೆಯೊಂದಿಗೆ ಒಟ್ಟು 14 ಆನೆಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ.

ದಸರಾಗೆ ಖಾಕಿ ಕಣ್ಗಾವಲು ದೊಡ್ಡ ಮಟ್ಟದಲ್ಲಿ ಇದೆ. ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಜನ ದಸರಾ ಕಣ್ತುಂಬಿಕೊಳ್ಳಲು ಮೈಸೂರಿಗೆ ಬಂದಿದ್ದು, ಸುರಕ್ಷಿತವಾಗಿ ದಸರಾ ನಡೆಸಲು ಪೊಲೀಸರು ಸಕಲ ರೀತಿಯಲ್ಲೂ ಸಿದ್ಧರಾಗಿದ್ದಾರೆ.