ದಾಖಲೆ ಪ್ರಮಾಣದಲ್ಲಿ ಯುವ ಜನತೆಗೆ ಸರ್ಕಾರಿ ಉದ್ಯೋಗದ ನೆರವು: ಪ್ರಧಾನಿ ಮೋದಿ.

26

ನವದೆಹಲಿ: ಕಳೆದ ಒಂದೂವರೆ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ ಸುಮಾರು 10 ಲಕ್ಷ ಖಾಯಂ ಸರ್ಕಾರಿ ನೌಕರಿಯನ್ನು ಯುವ ಜನತೆಗೆ ಒದಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ರೋಜ್ ಗಾರ್ ಮೇಳದಲ್ಲಿ ನೇಮಕಾತಿಯಾದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂತಹ ಕಾರ್ಯಕ್ರಮದ ಮೂಲಕ ಇಷ್ಟೊಂದು ದಾಖಲೆ ಪ್ರಮಾಣದಲ್ಲಿ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಉದ್ಯೋಗ ನೀಡುತ್ತಿರಲಿಲ್ಲ ಎಂದು ಹೇಳಿದರು. ಈ ರೋಜ್ ಗಾರ್ ಮೇಳದಲ್ಲಿ 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ನೀತಿಗಳು, ಕಾರ್ಯಕ್ರಮಗಳಲ್ಲಿ ಯುವ ಜನತೆಗೆ ಆದ್ಯತೆ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು. ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ನೀಡುವ ಸರ್ಕಾರದ ನಿರ್ಧಾರ ಅವರ ವೃತ್ತಿಜೀವನಕ್ಕೆ ಸಾಕಷ್ಟು ನೆರವಾಗಿದೆ. ಪ್ರಧಾನಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಯ ಬಹುತೇಕ ಮಾಲೀಕರು ಮಹಿಳೆಯರೇ ಆಗಿದ್ದಾರೆ. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, 71,000 ನೇಮಕಾತಿಯಲ್ಲಿ ಶೇ.29 ರಷ್ಟು ಮಂದಿ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಹಿಂದುಳಿದ ವರ್ಗಗಳ ನೇಮಕಾತಿ ಮೋದಿ ಸರ್ಕಾರದ ಅವಧಿಯಲ್ಲಿ ಶೇ. 27 ರಷ್ಟು ಏರಿಕೆ ಕಂಡಿದೆ. ಇಂದಿನ ರೋಜ್ ಗಾರ್ ಮೇಳದ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕ್ರಮವಾಗಿ 15.8 ಮತ್ತು 9.6 ರಷ್ಟಿವೆ ಎಂದು ಹೇಳಿದರು.