ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಹಬ್ಬ ಹಾಗೂ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸರಣಿ ರಜೆ ಮುಗಿಸಿ ಹಿಂದಿರುಗುವವರು ಹಾಗೂ ಮತ್ತಿತರ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನವೆಂಬರ್ 3 ಭಾನುವಾರ ಹಾಗೂ 4 ರಂದು ಸೋಮವಾರ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಬೇರೆ ಊರುಗಳಲ್ಲಿ ನೆಲೆಸಿರುವವರು ಬೆಳಕಿನ ಹಬ್ಬ ದೀಪಾವಳಿಯ ಆಚರಣೆಗಾಗಿ ಸ್ವಂತ ಊರುಗಳಿಗೆ ಆಗಮಿಸಲು ಅನುಕೂಲವಾಗುವಂತೆ ಅಕ್ಟೋಬರ್ 29ರಿಂದ 31ರ ವರೆಗೆ ವಿವಿಧ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಯ ಕಡೆಗೆ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು, ಮಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಊರುಗಳಲ್ಲಿ ನೆಲೆಸಿರುವ ಸಾವಿರಾರು ಜನರು ಹುಬ್ಬಳ್ಳಿ – ಧಾರವಾಡ ಸೇರಿದಂತೆ ಜಿಲ್ಲೆಯ ವಿವಿಧ ಊರುಗಳಿಗೆ ಆಗಮಿಸಿದ್ದಾರೆ.
ರಜೆ ಮುಗಿಸಿ ವಾಪಸ್ ಹಿಂದಿರುಗುವವರಿಗೆ ವಿಶೇಷ ರಿಯಾಯಿತಿಯ ಬಸ್ಸುಗಳಿಗೆ https://www.ksrtc.in ಅಥವಾ KSRTC Mobile App ಹಾಗೂ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್‍ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.