ನವದೆಹಲಿ : ದೆಹಲಿಯಲ್ಲಿ ವಾಯುಮಾಲಿನ್ಯ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ನಾಳೆಯಿಂದ ರಜೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ವಾಯು ಮಾಲಿನ್ಯದ ಪ್ರಮಾಣ ಹೆಚ್ಚಳವಾಗಿರುವುದರಿಂದ ದೆಹಲಿಯಲ್ಲಿ ನಾಳೆಯಿಂದ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು. ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ 5ರಿಂದ 7ನೇ ತರಗತಿಗಳ ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು. ದೆಹಲಿಯಲ್ಲಿ ಆಡಿ ಒನ್ ವ್ಯವಸ್ಥೆ ಮತ್ತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಶೀಘ್ರದಲ್ಲಿ ನಿರ್ಧಾರ ತಿಳಿಸಲಾಗುವುದು ಎಂದರು.
ವಾಯುಮಾಲಿನ್ಯ ಕೇವಲ ದೆಹಲಿ, ಪಂಜಾಬ್ ಗೆ ಸೀಮಿತವಾಗಿಲ್ಲ. ಉತ್ತರ ಭಾರತದ ಸಮಸ್ಯೆಯಾಗಿದೆ. ಹರಿಯಾಣ, ರಾಜಸ್ಥಾನದಲ್ಲೂ ಮಾಲಿನ್ಯ ಹೆಚ್ಚುತ್ತಿದೆ. ಕೇವಲ ಪಂಜಾಬ್, ದೆಹಲಿ ಸರ್ಕಾರ ಮಾತ್ರ ಇದಕ್ಕೆ ಹೊಣೆಯಲ್ಲ. ಇದು ರಾಜಕೀಯ ಆರೋಪ ಮಾಡುವ ಸಮಯವಲ್ಲ ಎಂದು ಹೇಳಿದರು.
ಈ ಮಧ್ಯೆ, ದೆಹಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಗೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ಪೀಠವು ನವೆಂಬರ್ 10 ರಂದು ವಿಚಾರಣೆಗೆ ಪಟ್ಟಿಮಾಡಿದೆ.
ಈ ಬಗ್ಗೆ ಇಂದು ಕೋರ್ಟ್ ಗಮನಕ್ಕೆ ತಂದ ವಕೀಲರು, ಕಳೆದ ಕೆಲವು ವರ್ಷಗಳಲ್ಲಿ ಎಕ್ಯೂಐ ಮಟ್ಟಗಳು 500 ಸಮಿಪಿಸಿದೆ. ಫಿಟ್ ಇರುವ ಜನರು ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಂಜಾಬ್ ನಲ್ಲಿ 22 ಪ್ರತಿಶತದಷ್ಟು ಹುಲ್ಲು ಸುಡುವಿಕೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಇದು ಜನರ ಬದುಕುವ ಹಕ್ಕನ್ನು ಒಳಗೊಂಡಿರುವುದರಿಂದ ಇಂದು ಅಥವಾ ನಾಳೆ ಅದನ್ನು ಆಲಿಸುವಂತೆ ನಾವು ಸುಪ್ರೀಂ ಕೋರ್ಟ್ಗೆ ವಿನಂತಿಸುತ್ತೇವೆ ಎಂದರು.










