ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಿಸಲು ಸಿಎಂ ಅರವಿಂದ್ ಕೇಜ್ರಿವಾಲ್ ಯಶಸ್ವಿಯಾಗಿದ್ದು, ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದಾರೆ.
ಲಾಕ್ ಡೌನ್ ನಿಯಮ ಸೋಮವಾರ(ಮೇ.31) ಬೆಳಗ್ಗೆ 5 ಗಂಟೆಗೆ ಅಂತ್ಯವಾಗಲಿದ್ದು, ಆ ಬಳಿಕ ನಾವು ಹಂತ ಹಂತವಾಗಿ ಅನ್ ಲಾಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಮೊದಲಿಗೆ ದಿನಗೂಲಿ ಕಾರ್ಮಿಕರಿಗೆ ಆದ್ಯತೆ ನೀಡಲಾಗಿದ್ದು, ಸೋಮವಾರದಿಂದ ನಿರ್ಮಾಣ ಚಟುವಟಿಕೆಗಳು ಮತ್ತು ಕಾರ್ಖಾನೆಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ಅವರು ಹೇಳಿದ್ದಾರೆ.
ದೊಡ್ಡ ಪರಿಶ್ರಮದಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಆದರೆ ಕೊರೊನಾ ಹೋರಾಟದ ಪೂರ್ಣ ಗೆಲುವು ಸಿಕ್ಕಿಲ್ಲ. ಒಂದು ವೇಳೆ ಕೊರೊನಾ ಮತ್ತಷ್ಟು ಏರಿಕೆಯಾದ್ರೆ ಅನ್ ಲಾಕ್ ಪ್ರಕ್ರಿಯೆಯನ್ನ ರದ್ದುಗೊಳಿಸಲಾಗುವುದು. ಹಾಗಾಗಿ ಜನತೆ ಅನ್ ಲಾಕ್ ನಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಮನವಿ ಮಾಡಿಕೊಂಡಿದ್ದಾರೆ.










