ಮುಂಬೈ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಪ್ರಸಾದ ಸೇವಿಸಿದ ನಂತರ ಅಸ್ವಸ್ಥಗೊಂಡ 300ಕ್ಕೂ ಹೆಚ್ಚು ಜನರಿಗೆ ರಸ್ತೆಯಲ್ಲೇ ಸಾಲಾಗಿ ಮಲಗಿಸಿ ಡ್ರಿಪ್ಸ್ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಒಂದು ವಾರದ ಧಾರ್ಮಿಕ ಕಾರ್ಯಕ್ರಮವಾದ ಹರಿಣಂ ಸಪ್ತಾಹದ ಕೊನೆಯ ದಿನವಾದ ನಿನ್ನೆ ರಾತ್ರಿ ಪ್ರಸಾದ ವಿತರಣೆ ಮಾಡಲಾಗಿತ್ತು. ಹೀಗೆ ಪ್ರಸಾದ ಸೇವಿಸಿದ ಬಳಿಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು.
ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಭಕ್ತರು ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಪ್ರಸಾದವನ್ನು ಸೇವಿಸಿದ ನಂತರ , ಅವರು ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿಯಿಂದ ಬಳಲಿದ್ದಾರೆ.
ಅಸ್ವಸ್ಥರಾದವರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬೆಡ್‌ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ರಸ್ತೆಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು. ಮರಗಳಿಗೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಡ್ರಿಪ್ಸ್ ಬಾಟ್ಲಿಗಳನ್ನು ಅಳವಡಿಸಲಾಗಿತ್ತು. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದು ಸೋಮಠಾಣಾದಲ್ಲಿ ಧಾರ್ಮಿಕ ಕಾರ್ಯಕ್ರಮದ ಆರನೇ ದಿನವಾಗಿತ್ತು. 400 ರಿಂದ 500 ಜನರಿಗೆ ಏಕಾದಶಿ ಪ್ರಸಾದ ವಿತರಿಸಲಾಯಿತು. ಎಲ್ಲ ರೋಗಿಗಳ ಸ್ಥಿತಿ ಸ್ಥಿರವಾಗಿದ್ದು, ಬಹುತೇಕರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ ಆಂಬ್ಯುಲೆನ್ಸ್ ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಪ್ರಸಾದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಾಟೀಲ್ ತಿಳಿಸಿದ್ದಾರೆ.










