ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಆರೋಗ್ಯದ ಬಗ್ಗೆ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಉತ್ತರ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು ದೇವೇಗೌಡರ ಆರೋಗ್ಯದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಬಂದು ದೇವೇಗೌಡರು ಪ್ರಚಾರ ಮಾಡುತ್ತಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಕೊಟ್ಟ ಹೇಳಿಕೆಯನ್ನೇ ಆಧಾರಿಸಿ ಮಾಜಿ ಸಂಸದ ಡಿ.ಕೆ.ಸುರೇಶ್ ನೀಡಿದ್ದಾರೆ. ಹಿಂದೆ ಅಶ್ವತ್ಥ್ ಪರ ದೇವೇಗೌಡರು ಹಳ್ಳಿ ಹಳ್ಳಿಗೆ ಬಂದು ಪ್ರಚಾರ ನಡೆಸಿರಲಿಲ್ವಾ, ಆಗ ವ್ಯಾಮೋಹಕ್ಕೆ ಬಿದ್ದು ದೇವೇಗೌಡರು ಪ್ರಚಾರಕ್ಕೆ ಬಂದಿದ್ದರಾ ಎಂದು ಪ್ರಶ್ನಿಸಿದರು. ದೇವೇಗೌಡರು ಬರುತ್ತಿರುವುದು ಮೊಮ್ಮಗನ ಪಟ್ಟಾಭಿಷೇಕಕ್ಕೆ ಎನ್ನುತ್ತಿದ್ದಾರೆ. ಅಶ್ವತ್ಥ್ ಗೆಲ್ಲಿಸಲು ಅವತ್ತು ದೇವೇಗೌಡರು ಹೋಗಿರಲಿಲ್ಲವೇ, ಅವತ್ತು ಯಾರಿಗೋಸ್ಕರ ದೇವೇಗೌಡರು ಹೋಗಿದ್ದರು, ಇದೀಗ ಈ ರೀತಿಯ ಸಣ್ಣತನದ ಹೇಳಿಕೆ ನೀಡುತ್ತಿರುವ ಅವರ ಮಾತಿಗೆ ಕಾಲವೇ ಉತ್ತರ ಕೊಡಲಿದೆ ಎಂದು ಎಚ್ಚರಿಸಿದರು.
ನಿಖಿಲ್ ಕುಮಾರಸ್ವಾಮಿ ಪರ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಇಂದು ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಯದುವೀರ್ ಅವರು ತಾವಾಗಿಯೇ ಸಮಯ ಮಾಡಿಕೊಂಡು ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ. ಅವರಿಗೆ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರೊಂದಿಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಮುಂದಿನ ನಾಲ್ಕು ದಿನ ಅವರು ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.










