ಬೆಂಗಳೂರು : ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ಸ್ಯಾಂಡಲ್ ವುಡ್ ನ ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅವರ ಸೀಮಂತ ಕಾರ್ಯಕ್ರಮ ನಡೆಯುತ್ತಿದೆ.
ರೇವತಿ ಅವರು ಈಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ನಗರದ ಹೆಚ್ ಎಸ್ ಆರ್ ಲೇಔಟ್ ನ ಮಾನ್ವಿ ಕನ್ವೆನ್ಷನ್ ಹಾಲ್ ನಲ್ಲಿ ಸೀಮಂತ ಕಾರ್ಯಕ್ರಮ ಮಾಡಲಾಗುತ್ತಿದೆ. ಕೋವಿಡ್ ಹಿನ್ನಲೆ ಕೇವಲ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಕುಮಾರಸ್ವಾಮಿ ಕುಟುಂಬದ ಆಪ್ತರು ಈ ಸೀಮಂತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
2020ರ ಏಪ್ರಿಲ್ ನಲ್ಲಿ ಬಿಡದಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ರೇವತಿ ಮತ್ತು ನಿಖಿಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರೇವತಿ ಪ್ರೆಗ್ನೆಂಟ್ ಎಂಬ ಸುದ್ದಿ ಇತ್ತೀಚಿನ ಕೆಲವು ತಿಂಗಳುಗಳಿಂದ ಕೇಳಿಬರುತ್ತಿತ್ತು. ಈ ಬಗ್ಗೆ ಸ್ವತಃ ನಿಖಿಲ್ ಪ್ರತಿಕ್ರಿಯೆ ನೀಡಿದ್ದರು. ಕೇಳಿಬರುತ್ತಿರುವ ಸುದ್ದಿ ನಿಜ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬರಲಿದ್ದಾರೆ ಎಂದು ನಿಖಿಲ್ ಹೇಳಿದ್ದರು.










