ನವದೆಹಲಿ : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ದ್ರೌಪದಿ ಮುರ್ಮು ಅವರಿಗೆ ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಪ್ರಧಾನಿ ಮೋದಿ, ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಪ್ರಮುಖರು ಹಾಜರಿದ್ದರು. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿದ ದೇಶದ ಎರಡನೇ ಮತ್ತು ಮೊದಲ ಬುಡಕಟ್ಟು ಮಹಿಳೆ ಎಂಬ ಖ್ಯಾತಿಗೆ ಮುರ್ಮು ಅವರು ಪಾತ್ರರಾದರು.
ಅಧಿಕಾರ ಸ್ವೀಕರಿಸಿದ ನಂತರ ಭಾಷಣ ಮಾಡಿದ ಅವರು, ನಾನು ಹುಟ್ಟಿದಾಗ ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿತ್ತು. ಈಗ 75 ವರ್ಷದ ಸಂಭ್ರಮದಲ್ಲಿ ನಾನು ರಾಷ್ಟ್ರಪತಿಯಾಗುತ್ತಿದ್ದೇನೆ. ಏಕ್ ಭಾರತ್ ಶ್ರೇಷ್ಠ ಭಾರತ್ ನಿರ್ಮಾಣಕ್ಕಾಗಿ ಕೆಲಸ ಮಾಡುವೆ. ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆ ಎಂದು ಹೇಳಿದರು.










