ಬೆಂಗಳೂರು : ಜನಸ್ಪಂದನ ಸಮಾವೇಶದ ಮೂಲಕ 2023ರ ಚುನಾವಣೆಗೆ ರಾಜ್ಯ ಬಿಜೆಪಿ ದೊಡ್ಡಬಳ್ಳಾಪುರದಿಂದ ಕಹಳೆ ಮೊಳಗಿಸುತ್ತಿದೆ. ಇಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಸಿಎಂ ಬೊಮ್ಮಾಯಿ ಜನರ ಮುಂದಿಡಲಿದ್ದಾರೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ಕೈದು ಜಿಲ್ಲೆಗಳಿಂದ 3 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, 5 ಸಾವಿರ ಬಸ್ ಗಳನ್ನು ನಿಯೋಜನೆ ಮಾಡಲಾಗಿದೆ. ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯ ರಘುನಾಥಪುರದಲ್ಲಿ ವೇದಿಕೆ ಸಜ್ಜುಗೊಳಿಸಲಾಗಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಿಂದ ಎರಡೂ ಕಡೆ 2 ಕಿ.ಮೀ ದೂರದವರೆಗೆ ಬ್ಯಾನರ್, ಫ್ಲೆಕ್ಸ್ ಅಬ್ಬರ ಎಲ್ಲರ ಗಮನ ಸೆಳೆಯುತ್ತಿದೆ.
40 ಎಕರೆ ವಿಸ್ತೀರ್ಣದಲ್ಲಿ ಜರ್ಮನ್ ಶೆಡ್ ನಿರ್ಮಿಸಲಾಗಿದೆ. ಲಕ್ಷಾಂತರ ಜನರು ಭಾಗವಹಿಸುವ ಕಾರಣ ತಾತ್ಕಾಲಿಕ ಅಡುಗೆ ಮನೆ ನಿರ್ಮಿಸಲಾಗಿದೆ. ಎರಡು ದೊಡ್ಡ ಕಂಪನಿಗಳಿಗೆ ಕ್ಯಾಟರಿಂಗ್ ಗುತ್ತಿಗೆ ನೀಡಲಾಗಿದೆ. 3 ಲಕ್ಷ ಜನರಿಗೆ ಊಟ ಸಿದ್ಧವಾಗುತ್ತಿದೆ. ಪಲಾವ್, ಮೊಸರನ್ನ, ಸಿಹಿ-ತಿಂಡಿ ತಯಾರಿಸಲಾಗುತ್ತಿದೆ.
ಕಾರ್ಯಕ್ರಮ ನಡೆಯುವ ಸ್ಥಳದಿಂದ ಒಂದು ಕಿ.ಮೀ. ಅಂತರದಲ್ಲಿ ಎರಡೂ ಕಡೆ ಒಟ್ಟು 12 ಜಾಗಗಳಲ್ಲಿ 200 ಎಕರೆ ವಿಸ್ತೀರ್ಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜನರನ್ನು ಕರೆತರಲು ಒಟ್ಟು 5,000 ಖಾಸಗಿ ಹಾಗೂ ಸರಕಾರಿ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲಿಯೂ ಸಂಚಾರ ದಟ್ಟಣೆ ಉಂಟಾಗದಂತೆ ಟ್ರಾಫಿಕ್ ಡಿವಿಯೇಷನ್ ಮಾಡಲಾಗಿದೆ . ಬಿಗಿ ಭದ್ರತೆಗಾಗಿ 2000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕಾರ್ಯಕ್ರಮದ ಪೂರ್ವನಿಗದಿಯಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾರ್ಯಕ್ರಮಕ್ಕೆ ಗೈರಾಗಲಿದ್ದು, ಕೇಂದ್ರ ಸಚಿವೆ ಸೃತಿ ಇರಾನಿ ಬರಲಿದ್ದಾರೆ. ಜೊತೆಗೆ, ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಎಲ್ಲಾ ಸಚಿವರು, ಹಾಲಿ, ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.










