ಧಮ್ಮಿದ್ರೆ, ತಾಕತ್ತಿದ್ರೆ ನನ್ನನ್ನ ಹೊಡೆದು ಹಾಕಿ ನೋಡೋಣ : ಸದನದಲ್ಲಿ ಸಿದ್ದರಾಮಯ್ಯ ಗುಡುಗು…

67
firstsuddi

ಬೆಂಗಳೂರು : ಟಿಪ್ಪುನನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಧಮ್ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ ಎಂದು ಗುಡುಗಿದರು.

ಅಶ್ವತ್ಥ್ ನಾರಾಯಣ್ ಹೇಳಿಕೆ ಪ್ರಚೋದನಾಕಾರಿ ಹೌದೋ? ಅಲ್ವೋ? ಎಂದು ಸದನದಲ್ಲಿ ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಆರಗ ಜ್ಞಾನೇಂದ್ರ ಅವರೇ ನೀವು ಒಳ್ಳೆಯವರು. ಆದರೆ, ಗೃಹ ಇಲಾಖೆ ನಿರ್ವಹಿಸಲು ಆರಗ ಜ್ಞಾನೇಂದ್ರ ಅಸಮರ್ಥರು ಎಂದರು. ಈ ವೇಳೆ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ಗೃಹ ಇಲಾಖೆ ನಿರ್ವಹಿಸಲು ನಾನು ಸಮರ್ಥನಿದ್ದೇನೆ. ನಿಮ್ಮ ಕಾಲಕ್ಕಿಂತ ಸಮರ್ಥವಾಗಿ ಇಲಾಖೆ ನಿರ್ವಹಣೆ ಮಾಡುತ್ತಿದ್ದೇನೆ ಎಂದರು.

ತಾನು ಗೃಹ ಇಲಾಖೆ ಮುನ್ನಡೆಸಲು ಸಮರ್ಥ ಎಂದು ಹೇಳಿದ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸಮರ್ಥರಾಗಿದ್ದರೆ ಅಶ್ವತ್ಥ್ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಿ ಎಂದರು. ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿದ್ದರಾಮಯ್ಯ, ಧಮ್ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ. ನಾನು ಎದುರಿಸಲು ಸಿದ್ಧನಿದ್ದೇನೆ. ಬಾಯಲ್ಲಿ ಹೇಳಿದ್ದಷ್ಟು ಸುಲಭ ಅಲ್ಲ ಎಂದರು.