ಮಂಗಳೂರು: ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಧರ್ಮಸ್ಥಳದ ಪವಿತ್ರ ನದಿ ನೇತ್ರಾವತಿಯನ್ನು ಗೋ ಹಂತಕರು ಗೋಮಾಂಸ ತ್ಯಾಜ್ಯವನ್ನು ಎಸೆದು ಮಲಿನ ಮಾಡಿದ್ದಾರೆ ಎಂಬ ಗಂಭೀರ ಆರೋಪ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ ದುಷ್ಕೃತ್ಯ ಎಸಗಲಾಗಿದೆ. ನೇತ್ರಾವತಿಯನ್ನು ಸೇರುವ ಉಪನದಿ ಮೃತ್ಯುಂಜಯ ಹೊಳೆಗೆ ಗೋ ಹತ್ಯೆಯ ಬಳಿಕದ ತ್ಯಾಜ್ಯವನ್ನು ದುಷ್ಕರ್ಮಿಗಳು ಎಸೆದು ಹೋಗಿದ್ದಾರೆ. ಪಶ್ಚಿಮ ಘಟ್ಟದಿಂದ ಹರಿದು ಧರ್ಮಸ್ಥಳ ಬಳಿ ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ಗೋವಿನ ರುಂಡ, ಮುಂಡ, ಚರ್ಮ ಎಸೆದಿರುವುದು ಕಂಡು ಬಂದಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಈ ಪೈಕಿ ಹೆಚ್ಚಿನವರು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಧರ್ಮಸ್ಥಳ ದೇಗುಲದ ಮಂಜುನಾಥ ಸ್ವಾಮಿಯ ನಿತ್ಯ ಅಭಿಷೇಕಕ್ಕೂ ನೇತ್ರಾವತಿಯ ನದಿಯ ನೀರನ್ನೇ ಬಳಸಲಾಗುತ್ತಿದೆ. ಹೀಗಾಗಿ, ಕೋಟ್ಯಂತರ ಭಕ್ತರ ನಂಬಿಕೆಗೆ ಗೋ ಹಂತಕರು ಕೊಳ್ಳಿ ಇಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಾರ್ಮಾಡಿ ಗ್ರಾಮದ ಅನ್ನಾರ್ ಬಳಿ ನದಿಯಲ್ಲಿ ಗೋವಿನ ರುಂಡ ಮುಂಡಗಳು ಪತ್ತೆಯಾಗಿರುವುದು ಸ್ಥಳೀಯರನ್ನು ಮತ್ತು ಧರ್ಮಸ್ಥಳದ ಭಕ್ತರನ್ನು ಆಘಾತಕ್ಕೆ ಈಡುಮಾಡಿದೆ. ಹೀಗೆ ಗೋ ಹತ್ಯೆ ಮಾಡಿದ ನಂತರ ಅವುಗಳ ಅವಶೇಷವನ್ನು ಮೂಟೆ ಕಟ್ಟಿ ನದಿಗೆ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.










