ನಟಿ ಉರ್ಫಿ ಜಾವೇದ್ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಗೋರೆಗಾಂವ್ ಪೊಲೀಸರು ಇಂದು ಬಂಧಿಸಿದ್ದಾರೆ. ವಾಟ್ಸ್ ಆಪ್ ಮೂಲಕ ನವೀನ್ ಗಿರಿ ಎನ್ನುವ ವ್ಯಕ್ತಿ ಉರ್ಫಿ ಜಾವೇದ್ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದ ಎಂದು ಹೇಳಲಾಗುತ್ತಿದೆ.
ವಾಟ್ಸಪ್ ಮೂಲಕ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ ಎಂದು ಉರ್ಫಿ ಜಾವೇದ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಆರೋಪಿ ನವೀನ್ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 354 (ಎ), 354 (ಡಿ), 506, 509 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ವಿವಾದಕ್ಕೂ ಉರ್ಫಿ ಜಾವೇದ್ ಅವರಿಗೆ ಬಹಳ ನಂಟು ಬೆಳೆದಿದೆ. ಅವರ ವಿರುದ್ಧ ಅನೇಕರು ಕೇಸ್ ದಾಖಲು ಮಾಡಿದ್ದಾರೆ. ಮೊನ್ನೆಯಷ್ಟೇ ಅವರು ದುಬೈನಲ್ಲಿ ಅರೆಬೆತ್ತಲಾಗಿ ಫೋಟೋಶೂಟ್ ಮಾಡುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಉರ್ಫಿ ಜಾವೇದ್ ಸ್ಪಷ್ಟನೆ ನೀಡಿದ್ದಾರೆ. ಫೋಟೋಶೂಟ್ ನಡೆಯುತ್ತಿದ್ದ ಸ್ಥಳದಲ್ಲಿ ಅನುಮತಿ ಪಡೆಯುವ ವಿಚಾರದಲ್ಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆಯೇ ಹೊರತು ಬಟ್ಟೆಯ ಬಗ್ಗೆ ಯಾವುದೇ ತಕರಾರು ವ್ಯಕ್ತವಾಗಿಲ್ಲ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.










