ಚಿಕ್ಕಮಗಳೂರು : ನಗರದ ಶ್ರೀ ಕಾಮಧೇನು ಗಣಪತಿ ಕ್ಷೇತ್ರದ ಧರ್ಮಾಧಿಕಾರಿ ಡಾ|| ಎಂ.ಎಸ್.ನಂಜುಂಡಸ್ವಾಮಿ (78) ನಿನ್ನೆ ಹೊಳೇನರಸೀಪುರದಲ್ಲಿ ಹೃದಯಾಘಾತದಿಂದ ನಿಧನರಾದರು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಹೊಳೇನರಸೀಪುರದ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ, ಮೃತ ದೇಹವನ್ನು ನಿನ್ನೆ ರಾತ್ರಿ ನಗರದ ಅವರ ನಿವಾಸಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಉಪ್ಪಳ್ಳಿ ರಸ್ತೆಯ ಮುಕ್ತಿಧಾಮ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ಮೃತದೇಹದ ಅಂತ್ಯಕ್ರಿಯೆ ನಡೆಯಿತು. ಹಿರಿಯ ಪಶುಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ನಂಜುಂಡಸ್ವಾಮಿ ಅವರು ತಾವು ಕರ್ತವ್ಯ ನಿರ್ವಹಿಸಿದ ಗ್ರಾಮಗಳಲ್ಲಿನ ಪಶು ಆಸ್ಪತ್ರೆಗಳನ್ನು ದಾನಿಗಳ ಸಹಕಾರದಿಂದ ಮೇಲ್ದರ್ಜೆಗೇರಿಸಿದ್ದರು.
ನೇರ ನಡೆ-ನುಡಿ ಮತ್ತು ಕ್ರಿಯಾಶೀಲತೆಗೆ ಹೆಸರಾಗಿದ್ದ ನಂಜುಂಡಸ್ವಾಮಿ ಅವರು ಬ್ರಾಹ್ಮಣ ಮಹಾಸಭೆಯ ರಾಜ್ಯ ವಲಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ, ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘದ ಸ್ಥಾಪಕ ಅಧ್ಯಕ್ಷ. ಪಶು ಪರೀಕ್ಷಕರ ಸಂಘದ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ, ಆಶಾಕಿರಣ ಅಂಧಮಕ್ಕಳ ಶಾಲೆಯ ಕಾರ್ಯದರ್ಶಿ ವಿಶ್ವವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಕೆ.ಆರ್.ಪೇಟೆ, ವಸ್ತಾರೆ ಮತ್ತು ಮಂಡಲ ಮನೆ ಗ್ರಾಮಗಳಲ್ಲಿ ಗಣಪತಿ ದೇವಾಲಯ ನಿರ್ಮಿಸಿದ್ದ ಅವರು ನಗರದ ರತ್ನಗಿರಿ ರಸ್ತೆಯಲ್ಲಿ ಪಾಳು ಕೊಂಪೆಯಾಗಿದ್ದ ಜಾಗದಲ್ಲಿ ಶ್ರೀ ಕಾಮಧೇನು ಗಣಪತಿ ಕ್ಷೇತ್ರವನ್ನು ನಿರ್ಮಿಸಿ ಎರಡು ದಶಕಗಳ ಕಾಲ ಅದನ್ನು ಅಭಿವೃದ್ದಿ ಪಡಿಸಿ ಕ್ಷೇತ್ರವನ್ನು ಇತ್ತೀಚೆಗಷ್ಟೇ ಹರಿಹರಪುರ ಶ್ರೀ ಮಠಕ್ಕೆ ವಹಿಸಿದ್ದರು.
ಸದಾ ಕ್ರಿಯಾಶೀಲರಾಗಿದ್ದ ನಂಜುಂಡಸ್ವಾಮಿ ಅವರು ಮದರ್ ಥೇರೆಸಾ ಯೂನಿವರ್ಸಿಟಿಯ ಗೌರವ ಡಾಕ್ಟರೇಟ್ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.










