ದಾವಣಗೆರೆಯಲ್ಲಿ ಹಾಡಹಗಲೇ ಭೀಕರ ಕೊಲೆ.. ಪ್ರೀತಿ ನಿರಾಕರಿಸಿದ ಯುವತಿಯನ್ನ ಕೊಂದ ಪಾಗಲ್ ಪ್ರೇಮಿ

63
firstsuddi

ದಾವಣಗೆರೆ : ಬೆಣ್ಣೆ ನಗರಿಯಲ್ಲಿ ಹಾಡುಗಲೇ ಭೀಕರ ಕೊಲೆ ನಡೆದಿದೆ. ಆಕ್ಟಿವ್ ಹೊಂಡಾದಲ್ಲಿ ತನ್ನ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನ ತಡೆದು ಮನ ಬಂದಂತೆ ಚುಚ್ಚಿ- ಚುಚ್ಚಿ ಕೊಂದಿರುವ ಪಾಗಲ್ ಪ್ರೇಮಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ.

ನಗರದ ಬಿ.ಜೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ವಿನೋಭನಗರದ ನಿವಾಸಿ ಚಾಂದ್ ಸುಲ್ತಾನಾ(24) ಕೊಲೆಯಾದ ಯುವತಿ. ಚಾಂದ್ ಪೀರ್ ಆಲಿಯಾಸ್ ಸಾದತ್ ಕೊಲೆ ಮಾಡಿದವ.

ಚಾಂದ್ ಸುಲ್ತಾನಾ ದಾವಣಗೆರೆ ವಿವಿಯಲ್ಲಿ ಎಂಕಾಂ ಪದವಿ ಮುಗಿಸಿ ತೆರಿಗೆ ಸಲಹೆಗಾರರಾದ ಕೆ.ಮಹ್ಮದ್ ಭಾಷಾ ಅವರ ಬಳಿ ಸಿ.ಎ.ಗಾಗಿ ತರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಳು. ಆದರೆ ಸಾದತ್ ಚಾಂದ್ ಸುಲ್ತಾನಾಳನ್ನ ಮದುವೆ ಆಗಲು ಪ್ರಯತ್ನಿಸಿದ್ದ.

ಆದರೆ ಕುಟುಂಬ ಸದಸ್ಯರು ಹಾಗೂ ಸುಲ್ತಾನಾ ನಿರಾಕರಿಸಿ ಮತ್ತೊಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಇದನ್ನ ಸಹಿಸದ ಸಾದತ್ ಸುಲ್ತಾನಾ ತನ್ನ ಕಚೇರಿಗೆ ಹೋಗುವ ರಸ್ತೆಗೆ ಬಂದಿದ್ದಾನೆ. ಸ್ವಲ್ಪ ಮಾತಾಡಬೇಕು ಎಂದು ರಸ್ತೆ ಬದಿಯ ಮರದ ಕೆಳಗೆ ಕರೆದು ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಂದಿದ್ದಾನೆ.

ಕುಟುಂಬದವರಿಗೆ ಕೊಲೆಯ ವಿಚಾರ ತಿಳಿದು, ಕೊಲೆಗಾರನನ್ನ ಹುಡುಕಾಡುವಷ್ಟರಲ್ಲೇ ಸಾದತ್ ವಿಷ ಸೇವಿಸಿ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.