ನನಗೆ ಬಿಜೆಪಿ ಟಿಕೆಟ್ ತಪ್ಪಲು ಬಿ.ಎಲ್ ಸಂತೋಷ್ ಕಾರಣ : ಜಗದೀಶ್ ಶೆಟ್ಟರ್ ಆರೋಪ…

52
firstsuddi

ಹುಬ್ಬಳ್ಳಿ : ನನಗೆ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಹಿರಂಗವಾಗಿಯೇ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪರಿಸ್ಥಿತಿಗೆ ಮೂಲ ಕಾರಣ ಬಿ.ಎಲ್ ಸಂತೋಷ್ ರಾಗಿದ್ದಾರೆ. ಒಬ್ಬ ಹಿರಿಯ ನಾಯಕರನ್ನು ಸೈಡ್‍ಲೈನ್ ಮಾಡಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲು ಆಗುವುದಿಲ್ಲ. ಆದರೆ ಇದರ ಹಿಂದೆ ಬಿಎಲ್ ಸಂತೋಷ್ ಇದ್ದಾರೆ. ಬಿ.ಎಲ್ ಸಂತೋಷ್ ಅವರ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿ ಆಗಿದ್ದಾರೆ. ಬಿ.ಎಲ್ ಸಂತೋಷ್ ಕೃಪೆಯಿಂದ ಪಕ್ಷದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿದರು. ವ್ಯಕ್ತಿಯೊಬ್ಬನಿಗೆ ಟಿಕೆಟ್ ನೀಡುವ ಸಲುವಾಗಿ ಇಂದು ಪಕ್ಷ ಒಡೆಯುತ್ತಿದೆ. ಟಿಕೆಟ್ ಕೊಡಿಸುವ ಸಲುವಾಗಿ ತಂತ್ರ, ಕುತಂತ್ರ ನಡೆದಿದೆ. ಇದೆಲ್ಲದಕ್ಕೂ ಬಿ.ಎಲ್ ಸಂತೋಷ್ ಅವರ ಪ್ರಿಪ್ಲ್ಯಾನ್ ಇದೆ. ಬಿ.ಎಲ್ ಸಂತೋಷ್ ಗೆ ಪಕ್ಷ ಮುಖ್ಯ ಅಲ್ಲ ವ್ಯಕ್ತಿ ಮುಖ್ಯ ಎಂದು ಗುಡುಗಿದರು.

ಕೋರ್ ಕಮಿಟಿ ಸಭೆಯಲ್ಲಿ ನನ್ನ ಹೆಸರು ಜೊತೆ ಒಟ್ಟು ಮೂವರ ಆಕಾಂಕ್ಷಿಗಳ ಹೆಸರುಗಳನ್ನು ಕಳುಹಿಸಲಾಗಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ಆದ್ರೆ, ಕೊನೆಗೆ ಟಿಕೆಟ್ ಕೈತಪ್ಪುವುದಕ್ಕೆ ಸಂತೋಷ್ ಕಾರಣ. ರಾಮದಾಸ್ ಕ್ಷೇತ್ರಕ್ಕೂ ನಾನು ಹೋಗಿದ್ದೆ. ರಾಮದಾಸ್ ನಿಂತರೆ ಗೆಲ್ಲುತ್ತಾರೆ. ರಾಮದಾಸ್ ಸಂತೋಷ್ ಆಪ್ತ ಅಲ್ಲ. ಶ್ರೀವತ್ಸ ಸಂತೋಷ್ ಅವರ ಆಪ್ತ. ಹಾಗಾಗಿ ರಾಮದಾಸ್ ಗೆ ಟಿಕೆಟ್ ಕೈತಪ್ಪಿದ್ದು, ಶ್ರೀವತ್ಸಗೆ ಟಿಕೆಟ್ ಸಿಕ್ಕಿದೆ. ರಾಮದಾಸ್ ಬಂಡಾಯ ಎದ್ದರೆ ಗೆಲ್ಲುವುದಕ್ಕೆ ಆಗಲ್ಲ. ಬಿಎಲ್ ಸಂತೋಷ್ ಕೇರಳದಲ್ಲಿ ಇನ್ ಚಾರ್ಜ್ ಮಾಡಿದ್ರು ಒಂದು ಸೀಟ್ ಬರಲಿಲ್ಲ. ತಮಿಳುನಾಡಿನಲ್ಲಿ ಎರಡು ಮೂರು ಸೀಟ್ ಬಂತು. ಇವತ್ತು ಕರ್ನಾಟಕದಲ್ಲಿ ಕಾರಬಾರು ಮಾಡುತ್ತಿದ್ದಾರೆ ಎಂದು ಸಂತೋಷ್ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.

ನಾನು ವಿಪಕ್ಷ ನಾಯಕನಾಗಿದ್ದ ಜನಪರ ಧ್ವನಿ ಎತ್ತಿದ್ದೇನೆ. ಶೆಟ್ಟರ್ ಅವಕಾಶವಾದಿ ಅಂತ ಟೀಕೆ ಮಾಡುತ್ತಿದ್ದಾರೆ. ನಾನು ರಾಜಕೀಯ ಲಾಲಸೆ ಅಂತ ಹೇಳುತ್ತಿದ್ದಾರೆ. ಆದರೆ ನಾನು ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ಬೇಡ ಅಂದೆ. 42ರ ದಿನ ಕಲ್ಯಾಣ ಕರ್ನಾಟಕದಲ್ಲಿ ವಿಜಯ ಸಂಕಲ್ಪಯಾತ್ರೆ ಮಾಡಿದ್ದೇನೆ. ಪಕ್ಷಕ್ಕೆ ಗಟ್ಟಿಯಾಗಿ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಹಳಷ್ಟು ದೊಡ್ಡದಾಗಿ ಬೆಳದಿದೆ. ಬಿಜೆಪಿಗೆ ಅಭ್ಯರ್ಥಿ ಯಾರು ನಿಲ್ಲುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಬಿಜೆಪಿ ಕಟ್ಟಿದ್ದೇನೆ. ಹೀಗಾಗಿ ಇಂದು ಬಿಜೆಪಿಗೆ ಭದ್ರವಾದ ನೆಲೆ ಸಿಕ್ಕಿದೆ ಎಂದರು.