ಬೆಂಗಳೂರು : ನನ್ನನ್ನು ಟ್ರೋಲ್ ಮಾಡುವ ತೊಂದರೆಯನ್ನು ನೀವು ತೆಗೆದುಕೊಳ್ಳಬೇಡಿ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಂಸದೆ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಹಗರಣದಲ್ಲಿ ರಕ್ಷಣೆ ಪಡೆಯಲು ಎಂ.ಬಿ. ಪಾಟೀಲ್ ಅವರು ಸಚಿವ ಅಶ್ವತ್ ನಾರಾಯಣ್ ಅವರನ್ನು ಭೇಟಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದರು. ಈ ವಿಚಾರವಾಗಿ ರಮ್ಯಾ ಅವರು, ರಾಜಕೀಯ ಪಕ್ಷದವರು ಪಕ್ಷಾತೀತವಾಗಿ ಭೇಟಿಯಾಗುತ್ತಾರೆ. ಎಲ್ಲಾ ಕಾರ್ಯಕ್ರಮಗಳಿಗೂ ಹೋಗುತ್ತಾರೆ, ಸಂಬಂಧಿಗಳು ಸಹ ಆಗಿದ್ದಾರೆ. ಆದರೆ ಡಿಕೆಶಿವಕುಮಾರ್ ಅವರ ಹೇಳಿಕೆ ಅಚ್ಚರಿ ತಂದಿದೆ. ಎಂ.ಬಿ. ಪಾಟೀಲ್ ಕಾಂಗ್ರೆಸ್ ಪಕ್ಷದ ಕಟ್ಟಾಳು. ಕಾಂಗ್ರೆಸ್ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬಾರದೇ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಟ್ರೋಲ್ ಡಿಕೆ ಶಿವಕುಮಾರ್ ಅವರೇ ಮಾಡಿಸಿದ್ದಾರೆ ಎಂದು ಮಾಜಿ ಸಂಸದೆ ನೇರ ಆರೋಪ ಮಾಡಿದ್ದರು. ಈ ಕುರಿತು ಇಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿರುವ ರಮ್ಯಾ ಸರಣಿ ಟ್ವೀಟ್ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಮರ ಸಾರಿದ್ದಾರೆ. ಡಿಕೆಶಿ ವಿರುದ್ಧ ಬಹಿರಂಗವಾಗಿಯೇ ಟ್ವಿಟ್ಟರ್ ನಲ್ಲಿ ಹಲವು ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿರುವ ರಮ್ಯಾ, ನನ್ನನ್ನು ಟ್ರೋಲ್ ಮಾಡುವಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ‘ಕಚೇರಿ’ ಈ ಸಂದೇಶಗಳನ್ನು ರವಾನಿಸಿದೆ. ಆದರೆ, ಅವರು ತೊಂದರೆ ತೆಗೆದುಕೊಳ್ಳುವುದು ಬೇಡ, ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಿಂದ 8 ಕೋಟಿ ಪಡೆದಿದ್ದೇನೆ ಅಂತಾ ಸುಳ್ಳುಸುದ್ದಿ ಹರಿಬಿಡಲಾಗಿದೆ. ನಾನು ಓಡಿ ಹೋಗಿದ್ದೇನೆ ಅಂತಾ ಸುಳ್ಳು ಸುದ್ದಿ ಹರಡಿಸಿದ್ರು. ನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಲಾಯ್ತು. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದೆ. ನಾನು ಮೌನವಾಗಿದ್ದೇ ತಪ್ಪಾಯ್ತು ಎಂದು ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್ ಗಾಂಧಿ. ನನಗೆ ಅವಕಾಶ ನೀಡಲಾಗಿದೆ ಅಂತ ಯಾರದ್ರೂ ಹೇಳಿದ್ರೆ ಅವರು ಅವಕಾಶವಾದಿಗಳು ಎಂದು ಆಕ್ರೋಶ ಹೊರಹಾಕಿದ್ದಾರೆ.
ವೇಣುಗೋಪಾಲ್ ಜೀ ನೀವು ಮುಂದೆ ಕರ್ನಾಟಕಕ್ಕೆ ಬಂದಾಗ ಈ ವಿಚಾರ ಕುರಿತು ದಯವಿಟ್ಟು ಮಾಧ್ಯಮಗಳೊಂದಿಗೆ ಸ್ಪಷ್ಟಪಡಿಸಿ. ನಾನು ನನ್ನ ಜೀವನದುದ್ದಕ್ಕೂ ಈ ನಿಂದನೆ ಮತ್ತು ಟ್ರೋಲಿಂಗ್ ನೊಂದಿಗೆ ಬದುಕಬೇಕಾಗಿಲ್ಲ. ಹೀಗಾಗಿ ನೀವು ನನಗೆ ಸ್ಪಷ್ಟನೆ ನೀಡಬೇಕಿದೆ ಎಂದು ಮನವಿ ಮಾಡಿದ್ದಾರೆ.
 
            
 
		








