ಬೆಂಗಳೂರು : ನಮ್ಮ ಪಕ್ಷವನ್ನು ಇನ್ನೊಂದು ಪಕ್ಷದ ಜೊತೆ ವಿಲೀನ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆದಿದೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ಕಚೇರಿಯ ಜೆ.ಪಿ. ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಏನೂ ಬೇಕಾದರೂ ನಡೆಯಬಹುದು. ಹೀಗೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಪಕ್ಷವನ್ನು ಇನ್ನೊಂದು ಪಕ್ಷದ ಜೊತೆ ಯಾವುದೇ ಕಾರಣಕ್ಕೂ ವಿಲೀನ ಮಾಡುವುದಿಲ್ಲ. ರಾಜಕಾರಣದಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಬಿಜೆಪಿಗೆ ಸಂಖ್ಯಾಬಲ ಬೇಕಾಗುವಷ್ಟಿದೆ. ಬಿಜೆಪಿಗೆ ಸದ್ಯಕ್ಕಂತೂ ನಮ್ಮ ಅವಶ್ಯಕತೆ ಇಲ್ಲ. ಬಿಜೆಪಿಯನ್ನು ಬಿ ಟೀಂ ಎಂದವರೇ, ನಮ್ಮ ಪಕ್ಷವನ್ನು ನಿರ್ಣಾಮ ಮಾಡಲು ಹೊರಟಿದ್ದವರೆ ನಮ್ಮ ಬಳಿ ಬಂದು ಕಾಂಗ್ರೆಸ್ ಮೈತ್ರಿ ಮಾಡಿಕೊಂಡರು. 2021 ರಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಭವಿಷ್ಯ ಹೇಳುವುದಿಲ್ಲ. ಈ ರಾಜ್ಯಕ್ಕೆ ಕುಮಾರಸ್ವಾಮಿ ಅವರ ಅನಿವಾರ್ಯ ಬರಬಹುದು. ಸಿದ್ದರಾಮಯ್ಯ ಅವರು ಕೆಲವು ದಿನಗಳಿಂದ ಭವಿಷ್ಯ ಹೇಳಲು ಆರಂಭಿಸಿದ್ದಾರೆ. ಬಿಜೆಪಿ ಬಗ್ಗೆ ನಮಗೆ ಯಾವುದೇ ಮೃದು ಧೋರಣೆ ಇಲ್ಲ. ಯಾರಿಗೂ ಗುಲಾಮತನಕ್ಕೆ ಪಕ್ಷವನ್ನು ಒಳಪಡಿಸಿಲ್ಲ. ವಿರೋಧ ಪಕ್ಷದಲ್ಲಿದ್ದ ಕಾರಣಕ್ಕೆ ಕೇವಲ ಪಕ್ಷವನ್ನು ವಿರೋಧ ಮಾಡುವುದಿಲ್ಲ. ನಾಡಿನ ಬೆಳವಣಿಗೆಗೆ ಸಹಕಾರವನ್ನು ನೀಡುತ್ತೇನೆ ಎಂದರು.