ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ತಾವು ಯಾವುದೇ ಹುದ್ದೆಗೆ ಅಂಟಿಕೊಂಡು ಕೂತಿಲ್ಲ ಎಂದು ಇಂದು ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಹೊಸ ರಾಜ್ಯಾಧ್ಯಕ್ಷರ ಬೇಡಿಕೆಯ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಯಾವುದೇ ಹುದ್ದೆಗೆ ಅಂಟಿಕೊಂಡು ಕೂತಿಲ್ಲ. ನಮ್ಮ ಪಕ್ಷದಲ್ಲಿ ಅವರ ನಾಯಕತ್ವ ಮತ್ತು ಸಂಘಟನಾ ಸಾಮಥ್ರ್ಯದ ಆಧಾರದ ಮೇಲೆ ಸ್ಥಾನಗಳನ್ನು ನೀಡಲಾಗುತ್ತದೆ. ನಾನು ಇತರ ರಾಜಕೀಯ ಪಕ್ಷಗಳ ಕುರಿತು ಮಾತನಾಡುವುದಿಲ್ಲ. ಹುದ್ದೆಯ ಕುರಿತು ಮಾಧ್ಯಮಗಳಲ್ಲಿ ಚರ್ಚಿಸಬೇಕಾಗಿಲ್ಲ ಎಂದು ತಿಳಿಸಿದರು. ಪಕ್ಷವು ಈ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಕರ್ನಾಟಕದವರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪರಿಸ್ಥಿತಿಯ ಕುರಿತು ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.