ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಇಂದು ಮಹತ್ವದ ಘೋಷಣೆ ಮಾಡಿದ್ದು, ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯಗೊಳ್ಳುತ್ತಿರುವ ಕಾರಣ ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ನನ್ನ ರಾಜ್ಯಸಭಾ ಅಧಿಕಾರಾವಧಿ ಪೂರ್ಣಗೊಂಡ ನಂತರ ನಾನು ನನ್ನ ಸಂಸದ ಸ್ಥಾನ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ” ಎಂದು ಶರದ್ ಪವಾರ್ ತಿಳಿಸಿದ್ದಾರೆ. ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, ರಾಜ್ಯಸಭಾ ಸದಸ್ಯನಾಗಿ ಮುಂದುವರೆಯುವ ಆಸಕ್ತಿ ಇಲ್ಲ ಎಂದು ಒತ್ತಿ ಹೇಳಿದರು. ನನ್ನ ಅವಧಿ ಇನ್ನೂ ಒಂದೂವರೆ ವರ್ಷ ಉಳಿದಿದೆ. ನಾನು ಲೋಕಸಭೆ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಇಲ್ಲಿಯವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ ಮತ್ತು ಯಾವುದೇ ಚುನಾವಣೆಯಲ್ಲೂ ನೀವು ನನ್ನನ್ನು ಮನೆಗೆ ಹೋಗಲು ಬಿಡಲಿಲ್ಲ. ಪ್ರತಿ ಬಾರಿ ನೀವು ನನ್ನನ್ನು ಗೆಲ್ಲಿಸಿದ್ದೀರಿ. ಆದರೆ ಈಗ ಹೊಸ ಪೀಳಿಗೆಗೆ ಅವಕಾಶ ನೀಡಬೇಕು. ನನಗೆ ಅಧಿಕಾರ ಬೇಡ. ಆದರೆ ನಾನು ಜನರ ಸೇವೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.