ನವದೆಹಲಿ: ದೇಶದ ಪ್ರಸಿದ್ಧ ಜಾನಪದ ಗಾಯಕಿ, ಬಿಹಾರದ ಕೋಗಿಲೆ ಎಂದೇ ಹೆಸರುವಾಸಿಯಾಗಿರುವ ಶಾರದಾ ಸಿನ್ಹಾ ನಿನ್ನೆ ರಾತ್ರಿ 9.20ಕ್ಕೆ ಕೊನೆಯುಸಿರೆಳೆದರು. ಇವರು ಸೆಪ್ಪಿಸೇಮಿಯಾ ಸೇರಿದಂತೆ ಇನ್ನು ಅನೇಕ ಗಂಭೀರ ಖಾಯಿಲೆಗಳಿಂದ ಬಳಲುತ್ತಿದ್ದರು. ಶಾರದಾ ಸಿನ್ಹಾ ಅವರು ಇದಲ್ಲದೇ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಶಾರದಾ ಸಿನ್ಹಾ 1970ರಿಂದಲೂ ಸಂಗೀತ ಕ್ಷೇತ್ರದಲ್ಲಿ ಹೆಸರಾದ ಚೇತನ. ಭೋಜ್‍ಪುರಿ, ಮೈಥಿಲಿ ಮತ್ತು ಹಿಂದಿ ಜಾನಪದ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಿಹಾರದ ಜಾನಪದ ಲೋಕಕ್ಕೆ ಸಿನ್ಹಾ ಸಾಂಸ್ಕೃತಿಕ ರಾಯಭಾರಿಯಂತಿದ್ದರು. ಅದರಲ್ಲೂ ವಿಶೇಷವಾಗಿ ಚತ್ ಗೀತೆ ಎಂದರೆ ತಕ್ಷಣ ಇವರ ಹೆಸರೇ ಜನಜನಿತ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾರದಾ ಸಿನ್ಹಾರ ಹೆಸರು ಚತ್ ಉತ್ಸವದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಬಿಹಾರ ಹಾಗು ಉತ್ತರ ಭಾರತದ ವಿವಿಧೆಡೆ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಶಾರದಾ ಸಿನ್ಹಾ ಕಲಾಸೇವೆಯನ್ನು ಪರಿಗಣಿಸಿ 2018ರಲ್ಲಿ ಕೇಂದ್ರ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳೂ ಇವರ ಮುಡಿಗೇರಿದ್ದವು.









