ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಚಾರಣಿಗ ಮನಾಲಿಯಲ್ಲಿ ಶವವಾಗಿ ಪತ್ತೆ…

71
firstsuddi

ಹಿಮಾಚಲ ಪ್ರದೇಶ: ದಟ್ಟ ಅರಣ್ಯಕ್ಕೆ ಚಾರಣಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ವ್ಯಕ್ತಿ ಹಿಮಾಚಲ ಪ್ರದೇಶದ ಮನಾಲಿಯ ಜೋಗಿಣಿ ಜಲಪಾತದ ಕಲ್ಲುಬಂಡೆಗಳ ಅಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ರಾಹುಲ್ ರಮೇಶ್ (35) ಮೃತ ವ್ಯಕ್ತಿ. ಸದ್ಯ ಮೃತದೇಹವನ್ನು ಜಲಪಾತದ ಕಮರಿಯಿಂದ ಹೊರತೆಗೆಯಲಾಗಿದೆ. ರಮೇಶ್ ಅವರು ಸೆ.28ರಂದು ದಟ್ಟ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆಂದು ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಮಾಹಿತಿಯ ಪ್ರಕಾರ, ರಮೇಶ್ ಅವರನ್ನು, ತಾಯಿ ಮತ್ತು ಸಹೋದರ ಟ್ರಕ್‌ನ ಪ್ರಾರಂಭದ ಸ್ಥಳದಲ್ಲಿ ಡ್ರಾಪ್ ಮಾಡಿದ್ದರು. ಅಂದು ರಮೇಶ್ ತಾನು ಕಾಡಿನಲ್ಲಿ ದಾರಿ ತಪ್ಪಿದ್ದಾಗಿ ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದರು.

ಮೆಸೇಜ್‌ ನೋಡಿದ ಸಹೋದರ ಮತ್ತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್‌ನ ಪರ್ವತಾರೋಹಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಸೇರಿದಂತೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

ಕಾರ್ಯಾಚರಣೆಯ ನೇತೃತ್ವವನ್ನು ಮನಾಲಿಯ ಉಪವಿಭಾಗದ ಪೊಲೀಸ್ ಅಧಿಕಾರಿ ಕ್ಷಮಾ ದತ್ ಶರ್ಮಾ ವಹಿಸಿದ್ದರು. ಭಾರತೀಯ ವಾಯುಪಡೆಯು 35 ವರ್ಷದ ವ್ಯಕ್ತಿಯನ್ನು ಪತ್ತೆಹಚ್ಚಲು ವೈಮಾನಿಕ ರೆಸಿಯನ್ನು ನಡೆಸಿತು. ಆದರೂ ಯಶಸ್ವಿಯಾಗಲಿಲ್ಲ.
ರಮೇಶ್ ನಾಪತ್ತೆಯಾಗಿದ್ದ ಒಂದು ದಿನದ ನಂತರ, ಜೋಗಿಣಿ ಜಲಪಾತದ ಬಳಿ ಅವರ ಮೊಬೈಲ್ ಪತ್ತೆಯಾಗಿದೆ. ಮೊಬೈಲ್‍ನಲ್ಲಿ ಆತ ತೆಗೆದ ಫೋಟೋಗಳು ಹಾಗೂ ಕಳಿಸಿದ ಮೆಸೇಜ್‌ಗಳನ್ನು ಆಧಾರವಾಗಿಟ್ಟುಕೊಂಡು ಹುಡುಕಾಟ ಆರಂಭಿಸಿದ ರಕ್ಷಣಾ ಪಡೆಗಳು, ಆತನ ಮೊಬೈಲ್ ಸಿಕ್ಕ 400 ಮೀಟರ್ ಅಂತರದಲ್ಲಿಯೇ ಆತನ ಶವವನ್ನು ಪತ್ತೆ ಹಚ್ಚಿದ್ದಾರೆ.

ಮಾಹಿತಿ ತಿಳಿದು ರಮೇಶ್ ಪತ್ನಿಯೂ ಮನಾಲಿಗೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.