ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ ಮೃತದೇಹ ಕಬ್ಬಿಣದ ಟ್ರಂಕ್‌ನಲ್ಲಿ ಪತ್ತೆ…

57
firstsuddi

ಚಂಡೀಗಢ: ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ ಮೃತದೇಹ ಕಬ್ಬಿಣದ ಟ್ರಂಕ್‌ನಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ ಜಲಂಧರ್ ಜಿಲ್ಲೆಯ ಕಾನ್ಪುರ ಗ್ರಾಮದಲ್ಲಿ ನಡೆದಿದೆ.

ಮೃತ ಸಹೋದರಿಯರನ್ನು ಕಾಂಚನ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ. ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು ಐವರು ಮಕ್ಕಳಿದ್ದರು. ಕೆಲಸದಿಂದ ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ದೂರು ನೀಡಿದ್ದಾರೆ. ಮರುದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ತಿಳಿದುಬಂದಿದೆ. ಈ ವೇಳೆ ಟ್ರಂಕ್ ಅನ್ನು ತೆರದಾಗ ಮೂವರು ಬಾಲಕಿಯರ ಮೃತದೇಹಗಳು ಅದರಲ್ಲಿ ಪತ್ತೆಯಾಗಿದೆ.

ಬಾಲಕಿಯರ ಸಾವು ನಿಗೂಢವಾಗಿದ್ದು, ಮೃತ ಬಾಲಕಿಯರ ತಂದೆ ಮಾದಕ ವ್ಯಸನಿ, ಕುಡಿದ ಮತ್ತಿನಲ್ಲಿ ತನ್ನ ಸ್ವಂತ ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಬಾಲಕಿಯ ತಂದೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ಏನನ್ನೂ ಹೇಳಲಾಗದು ಎಂದು ತನಿಖಾಧಿಕಾರಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಅವರ ಸಾವಿಗೆ ಕಾರಣದ ಬಗ್ಗೆ ಮಾಹಿತಿ ನೀಡಲಿದೆ.