ನಾರ್ವೆಯ ಪ್ರಸಿದ್ಧ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ…

58
firstsuddi

ಸ್ಟಾಕ್‍ಹೋಮ್(ಸ್ವೀಡನ್): ನಾರ್ವೆಯ ಪ್ರಸಿದ್ಧ ಲೇಖಕ ಜಾನ್ ಫಾಸ್ಸೆ ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

ಇನ್ನು ನೊಬೆಲ್ ಪ್ರಶಸ್ತಿ ಅಕಾಡೆಮಿ ಫಾಸ್ಸೆ ಅವರ ಕಾದಂಬರಿಗಳು ಧ್ವನಿ ಇಲ್ಲದವರಿಗೆ ದನಿಯಾಗಿದೆ ಎಂದು ವರ್ಣಿಸಿದೆ. ನೊಬೆಲ್ ಪ್ರಶಸ್ತಿ ಅಕಾಡೆಮಿ ಫಾಸ್ಸೆ ಅವರ ಹಲವಾರು ನಾಟಕಗಳು, ಕಾದಂಬರಿಗಳು, ಕವನ ಸಂಕಲನಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಭಾಷಾಂತರಗಳನ್ನು ಒಳಗೊಂಡಂತೆ ಹಲವು ಕೃತಿಯನ್ನು ಗೌರವಿಸಿ ಈ ಪ್ರಶಸ್ತಿಯನ್ನು ನೀಡಿದೆ.

ಜಾನ್ ಫಾಸ್ಸೆ 1959 ರಲ್ಲಿ ನಾರ್ವೆಯ ಪಶ್ಚಿಮ ಕರಾವಳಿಯ ಹೌಗೆಸುಂಡ್‌ನಲ್ಲಿ ಜನಿಸಿದರು. ಇವರ ಹಲವು ನಾಟಕಗಳು, ಕಾದಂಬರಿಗಳು, ಕವನ ಸಂಗ್ರಹಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಜಗತ್ತಿನಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಇನ್ನು ಅವರ ಚೊಚ್ಚಲ ಕಾದಂಬರಿ ರಾಡ್ಟ್, ಸ್ವಾರ್ಟ್ 1983, ಇದು ಭಾವನಾತ್ಮಕ ಕಾದಂಬರಿಯಾಗಿತ್ತು. ಜತೆಗೆ ಇದು ಹೆಚ್ಚು ಪ್ರಸಿದ್ಧತೆಯನ್ನು ಪಡೆದಿತ್ತು.

ಜಾನ್ ಫಾಸ್ಸೆ ಅವರು ತಮ್ಮ ಜೀವನದಲ್ಲಿ ಕಂಡ ದೈನಂದಿನ ಸನ್ನಿವೇಶಗಳನ್ನೇ ಸಾಹಿತ್ಯದ ಮೂಲಕ ಪ್ರಸ್ತುತ ಪಡಿಸುತ್ತಾರೆ. ಅತ್ಯಂತ ಪ್ರಭಾವಶಾಲಿ ಮಾನವ ಭಾವನೆಗಳನ್ನೂ ಅಷ್ಟೇ ಸರಳ ಪದ ರಚನೆ ಹಾಗೂ ತಮ್ಮ ನಾಟಕಗಳಲ್ಲಿ ವ್ಯಕ್ತಪಡಿಸುತ್ತಾರೆ ಎಂದು ಅಕಾಡೆಮಿ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.