ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ- ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು…

49
firstsuddi

ನವದೆಹಲಿ: ದೆಹಲಿಯ ಗೀತಾ ಕಾಲೋನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ಕು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಡೆದಿದೆ.

ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಕಾರು ಪಾರ್ಕಿಂಗ್ ಪ್ರದೇಶದಿಂದ ಬೆಂಕಿ ಹಬ್ಬುತ್ತಾ ಇಡೀ ಕಟ್ಟಡವನ್ನೇ ಆವರಿಸಿಕೊಂಡಿದೆ. ಮಲಗಿದ್ದ ನಿವಾಸಿಗಳು ಹೊರಬರಲಾಗದೇ ಮನೆಯೊಳಗೇ ಸಿಲುಕಿದ್ದಾರೆ. ಹೊಗೆ ಆವರಿಸಿಕೊಂಡು ಉಸಿರಾಡಲು ಒದ್ದಾಡಿದ್ದಾರೆ. ಇದರಿಂದ ನಾಲ್ವರು ಸಾವಿಗೀಡಾಗಿದ್ದಾರೆ. ಮೃತರನ್ನು ಮನೋಜ್ (30), ಅವರ ಪತ್ನಿ ಸುಮನ್ (28) ಮತ್ತು ಐದು ಮತ್ತು ಮೂರು ವರ್ಷದ ಇಬ್ಬರು ಬಾಲಕಿಯರು ಎಂದು ಗುರುತಿಸಲಾಗಿದೆ.

ಬೆಳ್ಳಂಬೆಳಗ್ಗೆ ಶಾಸ್ತ್ರಿ ನಗರ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಕರೆ ಬಂದಿತು. ತಕ್ಷಣವೇ ಅಗ್ನಿಶಾಮಕ ದಳ ತಂಡ ಸ್ಥಳಕ್ಕೆ ಆಗಮಿಸಿ ತುಂಬಾ ಹೊತ್ತಿನ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಪೊಲೀಸ್ ತಂಡ, ನಾಲ್ಕು ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಪಿಸಿಆರ್ ವ್ಯಾನ್‌ಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಕಟ್ಟಡದಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಯಿತು. ತೀವ್ರ ಉಸಿರಾಟ ತೊಂದರೆಯಿಂದ ನರಳುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.