ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನೇ ಹೋಲುವ ಮತ್ತೊಂದು ಘಟನೆ ಫೆಬ್ರವರಿ 13ರಂದು ದೆಹಲಿಯಲ್ಲಿ ನಡೆದಿತ್ತು. ದೆಹಲಿಯ ನಜಾಫ್ ಗಢ್ ನ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಡಾಬಾವೊಂದರಲ್ಲಿ ತನ್ನ 22 ವರ್ಷದ ಪ್ರಿಯತಮೆ ನಿಕ್ಕಿ ಯಾದವ್ ಕೊಂದು ಶವವನ್ನು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು 24 ವರ್ಷದ ಸಾಹಿಲ್ ಗೆಹ್ಲೋಟ್ ನನ್ನು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ಸಾಹಿಲ್ ತಂದೆ ಹೆಸರು ಕೂಡ ಬಯಲಿಗೆ ಬಂದಿದೆ. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸಾಹಿಲ್ ತಂದೆ ಸೇರಿ ಒಟ್ಟು 5 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ತಂದೆ ವೀರೇಂದ್ರ, ಆತನ ಸೋದರ ಸಂಬಂಧಿಗಳಾದ ಆಶಿಶ್ ಮತ್ತು ನವೀನ್, ಆತನ ಸ್ನೇಹಿತರಾದ ಲೋಕೇಶ್ ಮತ್ತು ಅಮರ್ ಅವರನ್ನು ನಿನ್ನೆ ತಡರಾತ್ರಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಾಹಿಲ್ ನ ತಂದೆಗೆ ಈ ಅಪರಾಧದ ಬಗ್ಗೆ ಮಾಹಿತಿ ತಿಳಿದಿತ್ತು. ಆದರೆ ನಿಕ್ಕಿಯನ್ನು ಕೊಂದ ಕೆಲವೇ ಗಂಟೆಗಳ ನಂತರ ತನ್ನ ಮಗನನ್ನು ಬೇರೊಬ್ಬರೊಂದಿಗೆ ಮದುವೆಯಾಗುವಂತೆ ತಂದೆಯೇ ಒತ್ತಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಸಾಹಿಲ್ ನ ಸಂಬಂಧಿಕರು ಮತ್ತು ಸ್ನೇಹಿತರು ಶವವನ್ನು ಫ್ರಿಡ್ಜ್ ನಲ್ಲಿ ಬಚ್ಚಿಡಲು ಸಹಾಯ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ :
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಾಹಿಲ್ ಗೆಹ್ಲೋಟ್ ಮತ್ತು ನಿಕ್ಕಿ ಪರಸ್ಪರ ಪ್ರೀತಿಸುತ್ತಿದ್ದರು. ಮಿತ್ರಾನ್ ಗ್ರಾಮದ ನಿವಾಸಿಯಾದ ಸಾಹಿಲ್, ಹರಿಯಾಣದ ಜಜ್ಜರ್ ನಿವಾಸಿ ನಿಕ್ಕಿಯನ್ನು 2018 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಗ ಭೇಟಿಯಾಗಿದ್ರು. ನಂತರ ಅವರು ಗ್ರೇಟರ್ ನೋಯ್ಡಾದ ಅದೇ ಕಾಲೇಜಿಗೆ ಪ್ರವೇಶ ಪಡೆದಿದ್ರು. ಒಟ್ಟಿಗೆ ಇದ್ದ ಇವರು ಗ್ರೇಟರ್ ನೋಯ್ಡಾದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ರು. ಕೋವಿಡ್ ಲಾಕ್ಡೌನ್ ಸಮಯದಲ್ಲಿ, ಅವರು ತಮ್ಮ ಮನೆಗಳಿಗೆ ಮರಳಿದರು ಮತ್ತು ಲಾಕ್ಡೌನ್ ಮುಗಿದ ನಂತರ, ಅವರು ಮತ್ತೆ ದ್ವಾರಕಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ರು. ಆದರೆ ಮದುವೆಯಾಗಲು ಸಾಹಿಲ್ ಗೆಹ್ಲೋಟ್ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಸಾಹಿಲ್ ನಿಕ್ಕಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಮೃತದೇಹವನ್ನು ಫ್ರಿಡ್ಜ್ ನಲ್ಲಿಟ್ಟಿದ್ದ.
ಹಂತಕ ಸಾಹಿಲ್ ಗೆಹ್ಲೋಟ್ ನನ್ನು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮದುವೆಯಾದ ನಂತರ ನಿಕ್ಕಿಯ ಶವವನ್ನು ಫ್ರಿಡ್ಜ್ ನಿಂದ ಹೊರತೆಗೆದು ಸೂಟ್ಕೇಸ್ನಲ್ಲಿ ತುಂಬಿಸಿ ಬೇರೆ ರಾಜ್ಯಕ್ಕೆ ಹೋಗಿ ವಿಲೇವಾರಿ ಮಾಡುವ ಪ್ಲಾನ್ ಮಾಡಿದ್ದೆ ಎಂದು ಸಾಹಿಲ್ ವಿಚಾರ ವೇಳೆ ಹೇಳಿದ್ದಾನೆ. ನಿಕ್ಕಿಯನ್ನು ಕೊಂದು 40 ಕಿಲೋಮೀಟರ್ ದೂರದಲ್ಲಿ ಕೊಂಡೊಯ್ದಿದ್ದ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿಕ್ಕಿ ಯಾದವ್ ಕೊಲೆಯಾಗುವ ರಾತ್ರಿ ಸಾಹಿಲ್ ಮನೆಗೆ ಆಗಮಿಸಿರುವ ಸಿಸಿಟಿವಿ ದೃಶ್ಯಗಳು ಸಿಕ್ಕಿವೆ.










