ನವದೆಹಲಿ : ನೀಟ್-ಪಿಜಿ 2021ರ ಕೋಟಾದಲ್ಲಿ ಖಾಲಿ ಇರುವ ವೈದ್ಯಕೀಯ ಸೀಟುಗಳಿಗೆ ವಿಶೇಷ ಕೌನ್ಸೆಲಿಂಗ್ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಈ ಅರ್ಜಿಯನ್ನು ನ್ಯಾ. ಎಂ.ಆರ್ ಶಾ ಮತ್ತು ನ್ಯಾ. ಅನಿರುದ್ಧ ಬೋಸ್ ಅವರ ಪೀಠ ವಿಚಾರಣೆ ನಡೆಸಿತ್ತು. ಈಗಾಗಲೇ 8-9 ಸುತ್ತಿನ ಕೌನ್ಸೆಲಿಂಗ್ ನಡೆಸಲಾಗಿದ್ದು, ಹೊಸದಾಗಿ ಕೌನ್ಸೆಲಿಂಗ್ ನಡೆಸುವುದು ಸರಿಯಲ್ಲ. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾ ಮಾಡುತ್ತಿದ್ದೇವೆ ಎಂದು ಹೇಳಿದೆ.
ಈ ಹಿಂದೆ ನೀಟ್-ಪಿಜಿ 2021ರ ಕೋಟಾದಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಕೌನ್ಸೆಲಿಂಗ್ ನಡೆಸಿ ಭರ್ತಿ ಮಾಡಲಾಗಿತ್ತು. ಈ ನಡುವೆ ವಿದ್ಯಾರ್ಥಿಗಳು ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದುಕೊಂಡಾಗ 1,456 ಸೀಟುಗಳು ಖಾಲಿ ಇರುವುದು ತಿಳಿದು ಬಂದಿತ್ತು. ಖಾಸಗಿ ಕಾಲೇಜುಗಳು ಸ್ವಹಿತಾಸಕ್ತಿಗಾಗಿ ಸೀಟುಗಳನ್ನು ಖಾಲಿ ಉಳಿಸಿಕೊಂಡಿವೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.










