ಆನೇಕಲ್: ನೀರಿನ ಸಂಪ್ ಸ್ವಚ್ಛತೆಗಿಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಆನೇಕಲ್ ತಾಲೂಕಿನ ಶಿಕಾರಿಪಾಳ್ಯದ ವಾಜಪೇಯಿ ಸರ್ಕಲ್ ಬಳಿಯ ಕಾರ್ಖಾನೆಯಲ್ಲಿ ನಡೆದಿದೆ.
ಬಿಹಾರ ಮೂಲದ ಕಾರ್ಮಿಕರಾದ ಚಂದನ್ ರಜ್ ಬನ್ ಸಿಂಗ್(31), ಪಿಂಟು ರಜ್ ಬನ್ ಸಿಂಗ್(22) ಮೃತರು. ಮೃತರು ಸಹೋದರರಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ತಿರುಪಾಳ್ಯದ ಶ್ರೀನಿವಾಸರೆಡ್ಡಿ ಎಂಬುವರಿಗೆ ಸೇರಿದ ಸನ್‌ಶೈನ್ ಹೋಲ್ಡಿಂಗ್ ಕಂಪನಿಯ ನೀರಿನ ಸಂಪ್ ಸ್ವಚ್ಛಗೊಳಿಸಲು ಇಬ್ಬರು ಕಾರ್ಮಿಕರನ್ನು ಸಂಪ್‌ಗೆ ಇಳಿಸಲಾಗಿತ್ತು. ಆ್ಯಸಿಡ್ ಹಾಕಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಹೋದ ಕಂಪನಿ ಮಾಲೀಕ ಶ್ರೀನಿವಾಸರೆಡ್ಡಿ ಮತ್ತು ಕಾರ್ಮಿಕ ಜಗದೀಶ್ ಕೂಡ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಉಳಿದ ಕಾರ್ಮಿಕರು ಈ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹೆಬ್ಬಗೋಡಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










