ನೋಯ್ಡಾ(ಉತ್ತರ ಪ್ರದೇಶ) : ಇಂದು ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜೇವಾರ್ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿ ಕಾರ್ಯ 10,050 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಡೆಯುತ್ತಿದೆ. ಅಂದಹಾಗೇ, ಈ ಏರ್ಪೋರ್ಟ್ ನ್ನು 1300 ಹೆಕ್ಟೇರ್ಗೂ ಹೆಚ್ಚಿನ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಏರ್ಪೋರ್ಟ್ 2024ರಿಂದ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ.
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ಇದು ದೆಹಲಿ-ಎನ್ಸಿಆರ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೋಟ್ಯಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರವಾಸೋದ್ಯಮ, ಸರಕು ಸಾಗಣೆಯ ಜೊತೆಗೆ, ಉದ್ಯೋಗ ಸೃಷ್ಟಿಸಲು ವಿಮಾನ ನಿಲ್ದಾಣಗಳು ಹೆಚ್ಚು ಸಹಕಾರಿ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು ಸಾಗಣೆಗೆ ದೊಡ್ಡ ಹೆದ್ದಾರಿ ಆಗಲಿದೆ. ಅನೇಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಇಲ್ಲಿಂದ ನೇರ ಸಂಪರ್ಕ ಸಿಗುತ್ತೆ. ಈ ಪ್ರದೇಶದ ರೈತರು ಬೆಳೆಯುವ ತರಕಾರಿ, ಹಣ್ಣು ಮತ್ತು ಮೀನು ವಿದೇಶಕ್ಕೆ ರಫ್ತು ಮಾಡಲು ಅನುವಾಗಲಿದೆ ಎಂದು ಪ್ರಧಾನಿ ವಿವರಿಸಿದರು.










