ಮುಂಬೈ: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ ಮುಂಬೈನ ನೌಕಾಪಡೆಯ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಮೂಲದ ಯುವತಿ ಮಲಾಡ್ನ ಪಶ್ಚಿಮ ಉಪನಗರದಲ್ಲಿರುವ ಮಾಲ್ವಾನಿ ಪ್ರದೇಶದ ಐಎನ್ಎಸ್ ಹಮ್ಲಾದಲ್ಲಿ ತರಬೇತಿ ಪಡೆಯುತ್ತಿದ್ದರು. ನಿನ್ನೆ ಬೆಳಗ್ಗೆ ಆಕೆ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ವೈಯಕ್ತಿಕ ಕಾರಣಗಳಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಎಡಿಆರ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೂತನ ಅಗ್ನಿಪಥ್ ಯೋಜನೆ ಅಡಿಯಲ್ಲಿ ಭಾರತೀಯ ಸೇನೆಯ ಮೂರು ವಿಭಾಗಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಯುವಕ-ಯುವತಿಯರು ತರಬೇತಿ ಸೇರಿದಂತೆ ನಾಲ್ಕು ವರ್ಷಗಳ ಕಾಲ ‘ಅಗ್ನಿವೀರ್’ ಎಂಬ ಹೆಸರಿನ ಯೋಧರಾಗಿ ಕೆಲಸ ಮಾಡಬಹುದಾಗಿದೆ. ನಾಲ್ಕು ವರ್ಷಗಳಲ್ಲಿ ಮೊದಲಿಗೆ ಆರು ತಿಂಗಳ ಕಠಿ ತರಬೇತಿ ಪಡೆಯಬೇಕಿರುತ್ತದೆ. ಈ ಯೋಜನೆಯನ್ನು ಜೂನ್ 14, 2022ರಲ್ಲಿ ಆರಂಭಿಸಲಾಗಿದೆ.










