ಆನೇಕಲ್(ಬೆಂಗಳೂರು): ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ತಾಲ್ಲೂಕಿನ ಬಿಕ್ಕನಹಳ್ಳಿಯ ಜನತಾಕಾಲೋನಿಯಲ್ಲಿ ನಡೆದಿದೆ.
ಲಕ್ಷ್ಮಮ್ಮ(47) ಪತಿಯಿಂದಲೇ ದಾರುಣವಾಗಿ ಕೊಲೆಯಾದ ಮಹಿಳೆ. ವೆಂಕಟಸ್ವಾಮಿ(53) ಎನ್ನುವಾತ ತನ್ನ ಪತ್ನಿಯನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಪತಿ.
ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ದಂಪತಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ವೆಂಕಟಸ್ವಾಮಿ, ಪತ್ನಿ ಲಕ್ಷ್ಮಮ್ಮಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ವೆಂಕಟಸ್ವಾಮಿ ಹೆಂಡತಿಯನ್ನು ಕೊಂದುಬಿಟ್ಟೆ ಎಂದು ಪ್ರಾಯಶ್ಚಿತಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗ್ಗೆ ಅಕ್ಕಪಕ್ಕದ ಮನೆಯ ನಿವಾಸಿಗಳು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸರ್ಜಾಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










