ಪತ್ರಿಕೋದ್ಯಮದ ಮೇಲೆ ಕೊರೋನಾ ಕರಿನೆರಳು…!

732
firstsuddi

ಡಾ. ಎಂ.ಎಸ್. ಮಣಿ

ಮಾಧ್ಯಮವನ್ನು ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕಿಂತಲೂ, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ವಿರೋಧಾಭಾಸ ಎಂಬಂತೆ ಭಾವಿಸಿದೆ. ಅಧಿಕಾರಕ್ಕೆ ಬಂದೊಡನೆ ಪತ್ರಕರ್ತರನ್ನು ಸದನದಿಂದ ಹೊರಗಿಡಲಾಯಿತು. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆಗೊಳಿಸುವಲ್ಲಿಯೂ ತಾರತಮ್ಯ ಎಸಗಿತು. ಜಾಹೀರಾತು ಬಿಲ್ಲನ್ನು ಕಳೆದೊಂದು ವರ್ಷದಿಂದ ಬಿಡುಗಡೆಯನ್ನೇ ಮಾಡಿರಲಿಲ್ಲ. ಪತ್ರಿಕೆಯನ್ನೇ ನಂಬಿ ಬದುಕು ಕಟ್ಟುಕೊಂಡಿರುವ ಸಂಪಾದಕರು ದುಃಸ್ಥಿತಿಯಲ್ಲಿದ್ದರು. ಪಕ್ಕದ ತಮಿಳುನಾಡಿನಲ್ಲಿ ಕೊರೋನಾ ಸಂಕಷ್ಟದಲ್ಲಿ ಪತ್ರಕರ್ತರಿಗೆ ಪ್ರತಿ ತಿಂಗಳು 2 ಸಾವಿರಗಳ ಸಹಾಯಧನ ನೀಡಲಾಗುತ್ತಿದೆ. ಇಲ್ಲಿಯೂ ನೀಡುವಂತವರಾಗಿ ಎಂದರೆ ಅದು ಕೂಡ ಯಥಾಪ್ರಕಾರ ಪರಿಶೀಲನೆಯಲ್ಲಿಟ್ಟಿದ್ದಾರೆ. ಅಲ್ಲದೆ, ವೈದ್ಯರಿಗೆ ಪ್ಯಾರಾಮೆಡಿಕಲ್ ಸಿಬ್ಬಂದಿಗಳಿಗೆ ಮತ್ತು ಪೊಲೀಸ್ಸರಿಗೆ ಸಿಗುವ ಆರ್ಥಿಕ ನೆರವನ್ನು ಪತ್ರಕರ್ತರಿಗೂ ವಿಸ್ತರಿಸಬೇಕೆಂದು ಕೋರಲಾಗಿತ್ತು. ಇದು ಕೂಡ ಪರಿಶೀಲನೆಯಲ್ಲಿದೆ. ಮೊದಲಿಗೆ ಯಡಿಯೂರಪ್ಪನವರು ಹೀಗಿರಲಿಲ್ಲ. ಅದಕ್ಕೆಂದು ಕೊರೋನಾ ಕಾರಣವನ್ನು ಕೊಡುವಂತಿಲ್ಲ. ಇನ್ನೂ ಬಾಕಿ ಇರುವುದು ಕಳೆದೊಂದು ವರ್ಷದ ಜಾಹೀರಾತು ಬಾಬತ್ತು. ಇಲಾಖೆಗೆ ಹರ್ಷರವರು ಆಯುಕ್ತರಾಗಿದ್ದೇ ತಡ ಬಹಳ ಮುತುವರ್ಜಿ ವಹಿಸಿ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಮಾಡಿಸಿದ್ದಾರೆ.

ಇದನ್ನೇಕೆ ಹೇಳಬೇಕಾಯಿತೆಂದರೆ, ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ವಾರ್ತಾ ಇಲಾಖೆಯ ನೂತನ ಆಯುಕ್ತ ಡಾ|| ಪಿ.ಎಸ್. ಹರ್ಷ ಒಂದೇ ದಿನದಲ್ಲಿ ಮಾಡಿ ಮುಗಿಸಿದ್ದಾರೆ. ಅಂದರೆ ಬೇಡಿಕೆಗಳನ್ನು ಈಡೇರಿಸಿದ್ದಾರೆಂದಲ್ಲ. ಬದಲಿಗೆ, ಕೊರೋನಾ ಪೀಡನೆಯ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ, ಸಾಮಾಜಿಕ ಜವಾಬ್ದಾರಿ, ಸುಳ್ಳು ಸುದ್ದಿಯಿಂದ ಆಗಿರುವ ಅವಘಡ, ಆರ್ಥಿಕ ಸ್ಥಿತಿ, ಸುದ್ದಿಯ ಮಹತ್ವ ಸೇರಿದಂತೆ ಎಲ್ಲದರ ಕುರಿತು ಅತ್ಯಂತ ಸೊಗಸಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಂದು “ಕೋವಿಡ್-19 ರೋಗ ತಡೆಗಟ್ಟುವಲ್ಲಿ ಮಾಧ್ಯಮಗಳ ಪಾತ್ರ’’ ವಿಚಾರಸಂಕಿರಣ ಉದ್ಘಾಟಿಸಿ ಹರ್ಷ ಅವರು ಆಡಿರುವ ಮಾತುಗಳು ಸೂಕ್ಷ್ಮ ಸಂವೇದನೆ ಹೊಂದಿರುವ ಪತ್ರಕರ್ತರನ್ನು ಖಂಡಿತವಾಗಿಯೂ ಸೆಳೆಯಬಲ್ಲದು.

ಕೊರೋನಾ ಭಾದಿತ ವ್ಯಕ್ತಿ `ಬೆದರಿಕೆ’ ಆಗಬಾರದು. ಇಲ್ಲಿ ವೈರಾಣು ಬೆದರಿಕೆಯೇ ಹೊರತು, ಭಾದಿತನಲ್ಲ. ಭಾದಿತನನ್ನು ಸಂವೇದನೆಯಿಂದ, ಸೂಕ್ಷ್ಮವಾಗಿ ಕಾಣಬೇಕು. ಕೊರೋನಾಗೆ ಔಷಧಿ ಇಲ್ಲ. ಒಂದು ವರ್ಷ ಕಾಯಬೇಕೆಂದು ತಜ್ಞರು ಹೇಳಿದ್ದಾರೆ. ಆದರೂ ಮಾಧ್ಯಮಗಳು ಹರ್ಬಲ್ ಸೇರಿದಂತೆ ಇನ್ನಿತರೆ ಔಷಧಗಳಿವೆ ಎಂಬ ಸುಳ್ಳು ವದಂತಿಗಳಿಗೆ ಪ್ರಚಾರ ನೀಡಿವೆ. ಹೀಗಾಗಿಯೇ ಟನ್ಗಟ್ಟಲೆ ಹೈಡ್ರಾಕ್ಸಿಲಿನ್ ಕ್ಲೋರಾಫಿನ್ ಮಾರಾಟ ಆಗಿದೆ. ಇದನ್ನು ಜನ ಯಥೇಚ್ಛವಾಗಿ ಸೇವಿಸಿ ಕಿಡ್ನಿಯನ್ನು ಕಳೆದುಕೊಂಡಿದ್ದಾರೆ. ಇಲ್ಲಿ ಕೊರೋನಾ ಸೋಂಕಿಗಿಂತ ಇಂತಹ ಔಷಧಗಳನ್ನು ಸೇವಿಸಿ ಪ್ರಾಣ ಬಿಟ್ಟವರ ಸಂಖ್ಯೆಯೇ ಹೆಚ್ಚಾಗಿದೆ. ಸರ್ಕಾರದ ತಪ್ಪುಗಳನ್ನು ಹೇಳಬೇಡಿ ಎನ್ನುವುದಿಲ್ಲ. ಹೇಳಬೇಕಾಗುತ್ತದೆ. ಆದರೆ ಅದು ಭಯ ಉಂಟುಮಾಡಬಾರದು. ಸರಿ-ತಪ್ಪು ತೋರಿಸಿ ಆದರೆ, ಸಂಭ್ರಮಿಸುವ ಘಳಿಗೆ ಇದಲ್ಲ. ಸೋಂಕು ತೊಡೆದುಹಾಕುವಲ್ಲಿ ನಮ್ಮದು ಪಾತ್ರವಿದೆ, ಜವಾಬ್ದಾರಿ ಇದೆ ಎಂಬುದನ್ನು ಅರಿತು ನಡೆಯುವ ಮಹತ್ವದ ಘಳಿಗೆ ಇಂದಿದೆ. ಹೆಗಲಿಗೆ, ಹೆಗಲು ಕೊಟ್ಟು ಮನೋಸ್ಥೈರ್ಯ ಹೆಚ್ಚಿಸುವಲ್ಲಿ ಕೆಲಸ ಮಾಡಬೇಕೆಂಬ ಮಾತುಗಳು ನಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟಿದೆ.

ಈ ಹೊತ್ತಿನ ಸಂದರ್ಭದಲ್ಲಿ ಇದನ್ನು ಎಲ್ಲರೂ ಒಪ್ಪಲೇಬೇಕಾಗುತ್ತದೆ. ಇರಲಿ, ಆಳುವವರಿಗೆ ಅನುಕೂಲವಾದ ಸುದ್ದಿ ಪ್ರಕಟವಾದಾಗ ಪ್ರಸನ್ನರಾಗುತ್ತಾರೆ. ಅಂದರೆ ಸರ್ಕಾರದ ಎಲ್ಲಾ ಕ್ರಮಗಳನ್ನು ಉತ್ತೇಜಿಸಿ ವರದಿ ಮಾಡಿದಾಗ, ಮೃದು ಧೋರಣೆಯಲ್ಲಿ ಮಂತ್ರಿ ಮಹೋದಯರ ಸಂದರ್ಶನಗಳನ್ನು ಮಾಡಿದಾಗ ಆಪ್ತತೆಯ ಭಾವದಲ್ಲಿರುತ್ತಾರೆ. ಅದೇ ಸರ್ಕಾರದ ತಪ್ಪು ಹೆಜ್ಜೆಗಳನ್ನು ಟೀಕಿಸಿದಾಗ ಅಥವಾ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದಾಗ ಉರಿದು ಬೀಳುತ್ತಾರೆ. ವಿನಾಕಾರಣ ಮೊಕದ್ದಮೆಗಳನ್ನು ಹಾಕಿ ಪೀಡಿಸುತ್ತಾರೆ.

ಪತ್ರಿಕಾ ಸ್ವಾತಂತ್ರ್ಯ ಕುರಿತಂತೆ ಎಲ್ಲಾ ರಾಜಕೀಯ ಪಕ್ಷಗಳು ಬಾಯಿ ಮಾತಿನ ಸಹಾನುಭೂತಿ ತೋರಿಸುತ್ತವೆ. ಇದಕ್ಕೆ ಕಾಂಗ್ರೆಸ್ ಪಕ್ಷ ಕೂಡ ಹೊರತಾಗಿಲ್ಲ. ದೃಶ್ಯ ಮಾಧ್ಯಮಗಳಲ್ಲಿ 24×7 ಕಾಣಿಸಿಕೊಳ್ಳುವ ಮತ್ತು ಸೂಟು-ಬೂಟು ಧರಿಸಿರುವ ಪತ್ರಕರ್ತರ ಮೇಲೆ ದಾಖಲಾಗುವ ಪ್ರಕರಣಗಳು ಮಾತ್ರ ಸರ್ಕಾರದ ಗಮನ ಸೆಳೆಯುತ್ತವೆ. ನ್ಯಾಯಯುತವಾದ ವರದಿಗಾರಿಕೆ ಮಾಡಿ, ಹಿಂಸೆ ಅನುಭವಿಸಿದ ಮುದ್ರಣ ಮಾಧ್ಯಮದ ಹತ್ತಾರು ಪತ್ರಕರ್ತರು ಎಲ್ಲಾ ಬಗೆಯ ಹಿಂಸೆಗೂ ತುತ್ತಾಗಿರುತ್ತಾರೆ. ಅಂದರೆ, ಇವರುಗಳು ಸರ್ಕಾರದ ವೈಫಲ್ಯಗಳ ಬಗ್ಗೆ ವರದಿ ಮಾಡಿದ್ದೇ ಅಪರಾಧ ಆಗಿರುತ್ತದೆ.

ನಮ್ಮ ಮಾಧ್ಯಮ ಸ್ವಾತಂತ್ರ್ಯಕ್ಕೆ ಯಾವುದೇ ಒತ್ತಾಸೆ ಇರುವುದಿಲ್ಲ. ಅಮೆರಿಕಾದಂತೆ ಇಲ್ಲಿ ಪತ್ರಕರ್ತರಿಗೆ ವಿಶೇಷ ಕಾಳಜಿಯನ್ನು ತೋರುವುದಿಲ್ಲ. ಇದರಿಂದಾಗಿಯೇ ಪತ್ರಕರ್ತರು ಸುಲಭವಾಗಿ ಆಳುವವರ ದೌರ್ಜನ್ಯಗಳಿಗೆ ಬಹು ಬೇಗ ಗುರಿಯಾಗುತ್ತಾರೆ. ಇತ್ತೀಚೆಗೆ ಕೆಲ ಪ್ರಕರಣಗಳಲ್ಲಿ ಕಾನೂನು-ಕಟ್ಲೆಗಳಿಗೆ ಸಿಲುಕಿದ ಪತ್ರಕರ್ತರನ್ನು ಪತ್ರಿಕೆಯೊಂದು ನಡುನೀರಿನಲ್ಲಿ ಕೈಬಿಟ್ಟಿತ್ತು. ವಾರ್ತಾ ಇಲಾಖೆ, ಪಿ.ಐ.ಬಿ., ಆರೋಗ್ಯ ಇಲಾಖೆ, ಗೃಹ ಇಲಾಖೆ, ಮಾಹಿತಿ ಪ್ರಸಾರ ಮಾಡುವ ಜವಾಬ್ದಾರಿ ಹೊತ್ತವರು ಕೊರೋನಾ ಸಂದರ್ಭದಲ್ಲಿ ಪತ್ರಕರ್ತರನ್ನು ಹೆಚ್ಚೆಚ್ಚು ಬಯಸುತ್ತಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ರವಿ ಹೆಗ್ಗಡೆ ಅವರು ಪ್ರಧಾನ ಭಾಷಣ ಮಾಡಿದರು. ಅವರು ಹೇಳಿದಂತೆ ಪತ್ರಕರ್ತರಿಂದು sleeping with enemies ಎಂಬುದು ನೂರಕ್ಕೆ ನೂರರಷ್ಟು ದಿಟ. ಪತ್ರಿಕೋದ್ಯಮ ಇಂದು ಅಪಾಯಕಾರಿ ವ್ಯವಹಾರವಾಗಿದೆ. ಬಂಡವಾಳಶಾಹಿ ನಂತರದ ಕಾಲದಲ್ಲಿ ಪ್ರತಿಯೊಂದನ್ನು ಸಾಮಾಜಿಕ ಜಾಲತಾಣಕ್ಕೆ ಎಡತಾಕಿ ಸಂದರ್ಶಿಸುವವರ ಸಂಖ್ಯೆಯನ್ನು ಆಧರಿಸಿ ನಿರ್ಧರಿಸಲಾಗುತ್ತಿದೆ. ಎಷ್ಟೇ ಗಂಭೀರವಾದ, ಕಾಳಜಿಯುಳ್ಳ ಸುದ್ದಿಯಾದರೂ, ಸಿನಿಮಾ ನಟ, ನಟಿಯ ವಿವಾಹ, ಮಗು ಹಡೆದ ಸುದ್ದಿಯೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಹೀಗಾಗಿ ಪತ್ರಿಕೋದ್ಯಮ ಪ್ರಸ್ತುತ ಸ್ಥಿತಿಯ ಮೇಲೆ ಸಾಗುವ ಅನಿವಾರ್ಯತೆಯನ್ನು ಹೇರಲಾಗುತ್ತಿದೆ.

ಪತ್ರಿಕಾ ಸ್ವಾತಂತ್ರ್ಯದಲ್ಲಿ ನಮ್ಮ ದೇಶ ಕೂಡ ಕೆಟ್ಟ ರ್ಯಾಂಕಿಂಗ್ ಅನ್ನು ಹೊಂದಿದೆ. ಇದು ಕೊರೋನಾಪೀಡಿತ ಕಾಲದಲ್ಲಿ ಗಾಯದ ಮೇಲೆ ಉಪ್ಪು-ಖಾರ ಸುರಿದಂತೆ ಆಗಿದೆ. ಆದರೂ, ಮಾಧ್ಯಮ ಎದುರಿಸುತ್ತಿರುವ ಸಮಸ್ಯೆಗಳ ಒಳಹೊಕ್ಕು ನೋಡಬೇಕಾಗುತ್ತದೆ. ಗಡಿಗಳಿಲ್ಲದ ವರದಿಗಾರರ ಪತ್ರಿಕಾ ಸ್ವಾತಂತ್ರ್ಯ ಅನುಸೂಚಿಯನ್ನು ಹೊಂದಿದೆ. ನಮ್ಮ ದೇಶ ಇದರಲ್ಲಿ 142ನೇ ರ್ಯಾಂಕ್ ಪಡೆದಿದೆ. ಪತ್ರಕರ್ತರ ಮೇಲೆ ಪತ್ರ್ಯೇಕತಾವಾದಿಗಳು, ಉಗ್ರರು ಹಾಗೂ ಅಪರಾಧಿಗಳು ಸೇರಿದಂತೆ ಇನ್ನಿತರರು ನಡೆಸುವ ದಾಳಿ ಕೂಡ ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದೆ.

ಕಾಶ್ಮೀರದಲ್ಲಿ 26 ವರ್ಷದ ಯುವ ಪತ್ರಕರ್ತೆ ಮಸ್ರತ್ ಜಹ್ರಾ ಅವರು ತಮ್ಮ ಪ್ರಕಟಿತ ಕೃತಿಯನ್ನು ಸಾಮಾಜಿಕ ಜಾಲತಾಣದ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೇ ಕಾರಣಕ್ಕೆ ಇವರ ಮೇಲೆ ಕಾನೂನುಬಾಹಿರ ಚಟುವಟಿಕೆ ಪ್ರತಿಬಂಧಕ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆ ಸೆಕ್ಷನ್ 505ರನ್ವಯ ಮೊಕದ್ದಮೆ ದಾಖಲಿಸಿದ್ದರು. ಇದನ್ನು ಕಂಡಾಗ ಮಾದ್ಯಮವನ್ನು ಬೆದರಿಕೆ, ಕಿರುಕುಳದ ಮೂಲಕ ಬಲಿಪಶುವಾಗಿಸಲು ಮುಂದಾದಂತಿದೆ.

ಮಸ್ರತ್ ಜಹ್ರಾ ಓರ್ವ ಫೊಟೋಜರ್ನಲಿಸ್ಟ್. ಈಕೆಯ ವಿರುದ್ಧ ದಾಖಲು ಮಾಡಿರುವ ಅಪರಾಧಿಕ ಪ್ರಕರಣ ಕಂಡಾಗ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ನಡೆದಿರುವುದು ಕಾಣುತ್ತದೆ. ಇಲ್ಲಿಯೇ ಪಿರ್ಜಾದಾ ಎಂಬ ಪತ್ರಕರ್ತನ ಮೇಲೆಯೂ ಪ್ರಕರಣ ಹೂಡಲಾಗಿದೆ. ಆದರೆ ಆರೋಪ ಏನು ಎಂಬುದರ ವಿವರ ತಿಳಿದು ಬಂದಿಲ್ಲ. ಹಿರಿಯ ಪತ್ರಕರ್ತರಾದ ಸಿದ್ದಾರ್ಥ ವರದರಾಜನ್ ಅವರ ಮೇಲೆಯೂ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಕೊರೋನಾದಂತಹ ಸಮರದ ಸಂದರ್ಭದಲ್ಲಿ ಪತ್ರಕರ್ತರನ್ನು ಮಟ್ಟ ಹಾಕಲು ಸರ್ಕಾರ ಮುಂದಾಗಬಾರದು.

ಕರ್ನಾಟದಲ್ಲಿಯೂ ಪತ್ರಿಕೋದ್ಯಮ ಹೂವಿನ ಹಾಸಿಗೆಯ ಮೇಲೆ ನಡೆದಂತಲ್ಲ. ಸರ್ಕಾರದ ಬೆದರಿಕೆ, ಅನಾದರದೊಂದಿಗೆ ಸ್ಪರ್ಧಿಸಬೇಕಿದೆ. ಅಲ್ಲದೆ, ಮಾಹಿತಿ ಕೊರತೆಯಿಂದಲೂ, ಕನಿಷ್ಠ ವೇತನ ಪಡೆದು, ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಕಾರ್ಯನಿರ್ವಹಿಸುವ ಸ್ಥಿತಿ ನಮ್ಮಲ್ಲಿದೆ. ಇತ್ತೀಚೆಗೆ ಪ್ರಮುಖ ಪತ್ರಿಕೆಯೊಂದರ ವರದಿಗಾರನನ್ನು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. ಇವರು ಸಂಪರ್ಕಕ್ಕೆ ಲಭ್ಯವಾಗದೆ, ಸಾಮಾಜಿಕ ಜಾಲತಾಣದ ತುಂಬಾ ತುಂಬಿಹೋಗಿದ್ದರು. ಮಂಡ್ಯದಲ್ಲಿ ಪತ್ರಕರ್ತರಿಗೆ ಕೊರೋನಾ ಸೋಂಕು ತಪಾಸಣೆಗೆ ಮುಂದಾದ ಸಂದರ್ಭದಲ್ಲಿಯೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದೇ ಘಳಿಗೆಯಲ್ಲಿ ಪತ್ರಿಕೆಯೊಂದರ ಹಿರಿಯ ವರದಿಗಾರರನ್ನು ಸೌಲಭ್ಯಗಳಿಲ್ಲದೆ, ಕನಿಷ್ಠ 6 ತಿಂಗಳು ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ. 6 ತಿಂಗಳ ನಂತರವಾದರೂ ಸಂಬಳ ಸಿಗಬಹುದೆಂಬ ಅಂದಾಜಿನಿಂದ ಕಾರ್ಯನಿರ್ವಹಿಸಲು ಬಹುಪಾಲು ಮಂದಿ ವಿಧಿ ಇಲ್ಲದೆ ಒಪ್ಪಿಗೆ ಕೊಟ್ಟಿರುತ್ತಾರೆ. ದೃಶ್ಯಮಾಧ್ಯಮದ ಗೆಳೆಯ ಶ್ರೀನಿವಾಸ ಹಳಕಟ್ಟಿ ಅವರು ಕ್ವಾರೆಂಟೈನ್ನಲ್ಲಿದ್ದಾಗ ಹೆತ್ತವ್ವನ ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳಲಾಗದ ವಿಷಮಸ್ಥಿತಿಯಲ್ಲಿದ್ದರು.

ಇಲ್ಲಿ ಪತ್ರಕರ್ತರು ಮಾತ್ರವಲ್ಲ ನ್ಯಾಯವಾದಿಗಳು, ಅನುದಾನರಹಿತ ಶಾಲೆಯ ಶಿಕ್ಷಕರು, ನ್ಯಾಯವಾದಿಗಳ ಬಳಿ ಕಾರ್ಯನಿರ್ವಹಿಸುವ ಕ್ಲರ್ಕ್ಗಳು, ಬೆರಳಚ್ಚುಗಾರರು ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಇವರಲ್ಲಿ ಪತ್ರಕರ್ತರು ಮತ್ತು ನ್ಯಾಯವಾದಿಗಳು ಅನುಕೂಲಸ್ಥರಾಗಿದ್ದರೆ ಉತ್ತಮ. ಅಂದರೆ ಪತ್ನಿ ಸರ್ಕಾರಿ ಶಾಲೆಯ ಶಿಕ್ಷಕಿ ಅಥವಾ ಯಾವುದಾದರೂ ವೃತ್ತಿಯಲ್ಲಿ ನೈಪುಣ್ಯತೆ ಸಾಧಿಸಿ ಸೇವೆಯಲ್ಲಿರಬೇಕು. ಇಲ್ಲವೇ ತಂದೆ-ತಾಯಿ ಸರ್ಕಾರಿ ಹುದ್ದೆಯಲ್ಲಿರಬೇಕು. ಅದರಲ್ಲೂ ಮಾಧ್ಯಮ ಕ್ಷೇತ್ರದಲ್ಲಿ ಸಂಬಳ ಕಡಿಮೆ. ವೇತನ ಆಯೋಗದ ವರದಿಗಳಿಗೆ, ಕಾರ್ಮಿಕ ಕಾನೂನು, ನಿಯಮಗಳಿಗೆ ಇಲ್ಲಿ ಬೆಲೆಯೇ ಇಲ್ಲ. ಇದ್ದರೂ ಕೊಡುವಷ್ಟು ಸಂಪನ್ಮೂಲ ಮಾಧ್ಯಮ ಸಂಸ್ಥೆಗೆ ಬರುವುದು ಅತ್ಯಂತ ವಿರಳ. ಅದರಲ್ಲೂ ಪ್ರಾದೇಶಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಹಬ್ಬ-ಹರಿದಿನಗಳಲ್ಲಿ ಉಡುಗೆ-ತೊಡುಗೆ ಬಿಟ್ಟರೆ ಮತ್ತೇನು ಸಿಗುವುದಿಲ್ಲ. ನಗರ ಪ್ರದೇಶಗಳಲ್ಲಿ ಮನೆ ಮಾಡಿ, ಸಂಸಾರ ಸಾಗಿಸುವೆ ಎಂಬುದೀಗ ಭ್ರಮೆಯಾಗಿದೆ. ಇನ್ನು ಕೊರೋನಾ ಪೀಡಿತ ಕಾಲದಲ್ಲಿ ಪತ್ರಕರ್ತರು ಅನುಭವಿಸಿದ ಕಷ್ಟ ಅವನಿಗಷ್ಟೇ ಗೊತ್ತಿದೆ. ಇದರ ಅರಿವಿದ್ದರಿಂದಲೇ ಬೆಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷರಾದ ಸದಾಶಿವ ಶೆಣೈ ಮತ್ತು ಪ್ರಧಾನ ಕಾರ್ಯದರ್ಶಿ ಕಿರಣ್ಕುಮಾರ್, ಕೋಶಾಧ್ಯಕ್ಷ ಬಿ.ಎನ್. ರಮೇಶ್ ಅವರ ತಂಡ ಆಹಾರ ಸಚಿವ ಗೋಪಾಲಯ್ಯ ಅವರ ಮನವೊಲಿಸಿ, ಆಹಾರದ ಕಿಟ್ಗಳನ್ನು ವಿತರಿಸಿ ಸಂಕಷ್ಟದಲ್ಲಿ ನೆರವಾಗಿದ್ದಾರೆ. ಲಾಕ್ಡೌನ್ ನಂತಹ ಸಂದರ್ಭದಲ್ಲಿ ನನ್ನಂತಹ ಅನೇಕರಿಗೆ ಇದು ದೊಡ್ಡ ನೆರವಾಗಿದ್ದು ಸುಳ್ಳಲ್ಲ.

ಪರಿಸ್ಥಿತಿ ಹೀಗಿರುವಾಗ ಯಾರೂ ಸಂಭ್ರಮಿಸಿ ಹಿರಿಯ ಪತ್ರಕರ್ತರಾದ ಎಂ. ಸಿದ್ದರಾಜು, ಲಕ್ಷ್ಮಣ ಕೊಡಸೆ, ಐ.ಎಚ್. ಸಂಗಮದೇವ, ಗಂಗಾಧರ ಮೊದಲಿಯಾರ್, ಜಿ.ಕೆ. ಸತ್ಯ, ರುದ್ರಣ್ಣ ಹರ್ತಿಕೋಟೆ, ವೆಂಕಟೇಶ್ ಪ್ರಸಾದ್, ನಟರಾಜ್, ಎಚ್.ಎಂ. ಶಂಕರ್, ಎಸ್. ಸತೀಷ್, ಕೆ.ವಿ. ಪ್ರಭಾಕರ್, ಲಕ್ಷ್ಮಿನಾರಾಯಣ, ಜನಾರ್ಧನಾಚಾರಿ, ವೆಂಕಟ ಸಿಂಗ್, ಈಶಾನ್ಯ ಟೈಮ್ಸ್ ನಾಗರಾಜ್,  ಟೆಲೆಕ್ಸ್, ರವಿಕುಮಾರ್, ಮಂಜುನಾಥ ಬೊಮ್ಮನಕಟ್ಟೆ, ಕಲಾವಿದ ವಿಷ್ಣು, ಡಾ. ರಾಜು ಕಂಬಾರ್, ಮಿಂಚು ಶ್ರೀನಿವಾಸ್, ಕೋ.ನಾ. ಮಂಜುನಾಥ್, ಕೆ.ಎಸ್. ಗಣೇಶ್, ಬಿ.ವಿ. ಗೋಪಿನಾಥ್, ಸೋಮಣ್ಣ, ಐ.ಎಂ. ವಿಠಲಮೂರ್ತಿ, ಜಯಕಿರಣ, ಜಯಕುಮಾರ್ ಅವರಂತೆ ಆಗುತ್ತೇನೆ ಎಂದು ಮುಂದೆ ಬರುವುದಿಲ್ಲ.

ಇಂತಹ ಬಿಕ್ಕಟ್ಟಿಗೆ ಕಾರಣವೇನೆಂದು ಅನ್ವೇಷಿಸುತ್ತಾ ಸಾಗಿದರೆ, ಅಲ್ಲಿ ವಿತ್ತೀಯ ಕೊರತೆಯೂ ಕಂಡುಬರುತ್ತದೆ. ದಶಕಗಳ ಕಾಲದಿಂದಲೂ ಜನರ ನಾಡಿಮಿಡಿತವಾಗಿ ಹೊರಬರುತ್ತಿದ್ದ ನಂಬಿಕಾರ್ಹ ಪತ್ರಿಕೆ ಕೊರೋನಾ ಮತ್ತು ಇತರ ಕಾರಣಗಳಿಗಾಗಿ ತೀವ್ರತರದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹಿರಿಯ ಪತ್ರಕರ್ತ ರವಿ ಹೆಗ್ಗಡೆ ಅವರು ಹೇಳಿದಂತೆ, ಮುಂಬೈನಲ್ಲಿ ಭೂಕಂಪ, ಗಲಭೆ ಸೇರಿದಂತೆ ಎಲ್ಲಾ ಬಗೆಯ ಅವಘಡಗಳು ಸಂಭವಿಸಿದಾಗಲೂ ಅಲ್ಲಿನ ಪತ್ರಿಕೆಯೊಂದು ಎಡೆಬಿಡದೆ ಹೊರಬರುತ್ತಿತ್ತು. ಆದರೆ ಕೊರೋನಾ ಕಾರಣಕ್ಕೆ ಇದೀಗ ಅಲ್ಲಿನ ಪ್ರಮುಖ ಪತ್ರಿಕೆಯೊಂದು ನಿಂತು ಹೋಗಿದೆ. ಹೀಗೆಯೇ ಯಾವುದೇ ಮೂನ್ಸೂಚನೆ ನೀಡದೆ ನೆರೆಯ ರಾಜ್ಯ ಗೋವಾದಲ್ಲಿ ಗೋಮಂತಕ್ ಟೈಮ್ಸ್ ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಓದುವಿಕೆ ಒಂದು ಅಸ್ತಂಗತ ಕಲೆ ಎಂದು ಭಾವಿಸಿರುವ ಇಂದಿನ ದಿನಮಾನಗಳಲ್ಲಿ ಇವೆರಡು ಪತ್ರಿಕೆಗಳ ಕಣ್ಮರೆ ನಿರಾಶೆ ಮೂಡಿಸಿದೆ.

ಗೋಮಂತಕ್ ಟೈಮ್ಸ್ ಕಳೆದ 32 ವರ್ಷಗಳಿಂದ ಸತತವಾಗಿ ತನ್ನ ಪ್ರಕಟಣೆಯನ್ನು ಕಂಡಿತ್ತು. ಅನಿರ್ಭಂದಿತ ಕಾಲ ಪತ್ರಿಕೆಯ ಪ್ರಕಣೆಯನ್ನು ಅಮಾನತ್ತುಗೊಳಿಸುವುದಾಗಿ ಸ್ಥಾನಿಕ ಸಂಪಾದಕರು ಪ್ರಕಟಣೆ ನೀಡಿದ್ದಾರೆ. ಇದು ಮತ್ತೆ ಪುನರಾರಂಭಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಪತ್ರಿಕೆಗಳು ಓದುಗರಿಂದ ಬೆಳೆಯುತ್ತವೆ. ಅದೊಂದು ರೀತಿಯಲ್ಲಿ ಕುಟುಂಬದ ಸದಸ್ಯರಿದ್ದಂತೆ. ದಿನನಿತ್ಯದ ಒಂದು ಕಪ್ ಕಾಫಿ ಅಥವಾ ಟೀ ಇದ್ದಂತೆ. ಇವಿಲ್ಲದಾಗ ಒಂಥರಾ ನಿರಾಶೆ-ದುಃಖ ಓದುಗರಲ್ಲಿ ಮಾತ್ರವಲ್ಲ, ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದ ಪತ್ರಕರ್ತರಲ್ಲೂ ಆಗುತ್ತದೆ.

ಕೊರೋನಾ ಪೀಡಿತ ಕಾಲದಲ್ಲಿ ಪತ್ರಿಕೆಯ ಮುದ್ರಣದ ಅಧಿಕ ವೆಚ್ಚ, ಓದುಗರ ಸಂಖ್ಯೆಯ ಇಳಿಮುಖ, ಕಾರ್ಪೊರೇಟ್ ಕಂಪನಿಗಳ ವ್ಯವಹಾರ ಸ್ಥಗಿತದಿಂದ ನೀಡುತ್ತಿದ್ದ ಜಾಹೀರಾತುಗಳ ಇಳಿಮುಖ, ಸರ್ಕಾರದ ಜಾಹೀರಾತಿನ ಕೊರತೆ ಇವೆಲ್ಲವು ಪತ್ರಿಕೆ ಮುಚ್ಚಲು ಕಾರಣವಾಗಿದೆ. ಕೊರೋನಾ ಸೋಂಕು ಕಡಿಮೆಯಾಗದಿದ್ದಲ್ಲಿ ಇನ್ನಷ್ಟು ಪತ್ರಿಕೆಗಳು ದೇಶಾದ್ಯಂತ ನಿಧಾನಗತಿಯಲ್ಲಿ ಅಂತ್ಯ ಕಾಣುತ್ತವೆ. ಅಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಬದುಕು ಕೂಡ ಅತಂತ್ರಕ್ಕೆ ಒಳಗಾಗಲಿದೆ.

ಇವತ್ತು ಚಂದಾದಾರರ ಮೇಲೆ ಅವಲಂಬಿತವಾಗುವ ಕಾಲವೂ ಬದಲಾಗಿದೆ. ವಾಸ್ತವವಾಗಿ ನೋಡಿದರೆ ಚಂದಾದಾರಿಕೆಯೇ ಅಸ್ತಿತ್ವದಲ್ಲಿದ್ದಂತಿಲ್ಲ. ಕೊರೋನಾ ಸೋಂಕಿಗಿಂತ `ಲಾಕ್ಡೌನ್’ ಎಂಬುದು ಹಲವರ ಉದ್ಯೋಗಕ್ಕೆ ಸಂಚಕಾರ ತಂದಿಟ್ಟಿತ್ತು. ಇದನ್ನು ದೇಶದ ಉದ್ದಗಲಕ್ಕೂ ಇರುವ ಪತ್ರಿಕೆಗಳಲ್ಲಿ ಕಾಣಬಹುದು. ಇದಲ್ಲದೆ, ಹಲವು ಪತ್ರಿಕೆಗಳು ತನ್ನ ಆವೃತ್ತಿಗಳನ್ನು ಮುಚ್ಚುತ್ತಿದೆ. ಕೆಲವೆಡೆ ಅಲ್ಲಿದ್ದ ಸಿಬ್ಬಂದಿಯ ವೇತನವನ್ನು ಕನಿಷ್ಠ ವೇತನಕ್ಕೆ ಇಳಿಸಲಾಗುತ್ತಿದೆ. ಇಂತಹ ಆರ್ಥಿಕ ಮುಗ್ಗಟ್ಟು ಪತ್ರಕರ್ತರ ವರದಿಗಾರಿಕೆಯ ಮೇಲೂ ಗಂಭೀರವಾದ ಪರಿಣಾಮ ಬೀರಿದೆ. ಅಪಾಯಕಾರಿ ಸಾಹಸಕ್ಕೆ ಕೈಹಾಕುವಂತೆಯೂ ಮಾಡಲು ಉತ್ತೇಜಿಸುತ್ತಿದೆ.

ಕೊರೋನಾ ಸೋಂಕಿನಿಂದ ರಕ್ಷಿಸಿಕೊಂಡು ಕರ್ತವ್ಯನಿರ್ವಹಣೆ ಮಾಡಲು ಬೇಕಾದ ಅಗತ್ಯ ಪರಿಕರಗಳನ್ನು ಪತ್ರಕರ್ತರಿಗೆ ಒದಗಿಸಿಕೊಡಲು ಕೆಲವು ಮಾಧ್ಯಮ ಸಂಸ್ಥೆಗಳು ಎಡವಿದೆ. ಪತ್ರಕರ್ತರ ಸುರಕ್ಷತೆ ಕಾಪಾಡಲು ಮಾಧ್ಯಮ ಸಂಸ್ಥೆ ಮಾತ್ರವಲ್ಲದೆ, ಮಾಧ್ಯಮ ಸಂಘಟನೆಗಳು ಕೂಡ ವಿಫಲವಾಗಿವೆ.

ಇನ್ನು ಕೊರೋನಾ ಕುರಿತು ನಿಸ್ಪಕ್ಷಪಾತ ಸುದ್ದಿ ಒದಗಿಸಲು ಮುಂದಾದಾಗ, ಕೆಲವೆಡೆ ನ್ಯೂಸ್ಪ್ರಿಂಟ್ ದರ ಏರಿಕೆ ಮತ್ತು ಜಾಹೀರಾತು ಕಡಿತಗೊಳಿಸುವ ಬೆದರಿಕೆಯೂ ಎದ್ದಿದೆ.

ಕೊರೋನಾ ತೀವ್ರವಾಗಿರುವ ಕಾಲದಲ್ಲಿ ಸುಳ್ಳು ಸುದ್ದಿಗಳ ಭೀತಿ ಇದ್ದೇ ಇದೆ. ಇದಕ್ಕೆ ನಮ್ಮ ತಾಂತ್ರಿಕ ಬೆಳವಣಿಗೆಯೂ ಕಾರಣವಾಗಿದೆ. ಇದನ್ನು ಹಿರಿಯ ಪತ್ರಕರ್ತ ರವಿ ಹೆಗ್ಗಡೆ ಅವರು ಕೂಡ ಒಪ್ಪಿಕೊಂಡಿದ್ದಾರೆ. ಸುದ್ದಿಯ ಮೂಲ, ಸತ್ವ ಯಾವುದನ್ನೂ ಪರಿಶೀಲಿಸದೆ ಪ್ರಕಟವಾಗುವ ಸುದ್ದಿ ಕ್ಷಣಾರ್ಧದಲ್ಲಿ ಗುರಿತಲುಪಿರುತ್ತದೆ.

ಇವತ್ತಿನ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣದಿಂದಾಗಿ ಮುಖ್ಯ ವಾಹಿನಿಯ ಮಾಧ್ಯಮ ನೇಪಥ್ಯಕ್ಕೆ ಸರಿದಿದೆ. ಹಿಂದೆ ಪತ್ರಕರ್ತರ ಅಭಿಪ್ರಾಯಗಳನ್ನು ವಿರಳವಾಗಿ ಸವಾಲಿಗೆ ಒಡ್ಡಲಾಗುತ್ತಿತ್ತು. ಆದರೆ, ಇಂದು ಸಾಮಾಜಿಕ ಜಾಲತಾಣದ ಯೋಧರು ಸತತವಾಗಿ ಪರಾಮರ್ಷೆಗೊಳಪಡಿಸುತ್ತಾ ಸವಾಲಾಗಿ ಪರಿಣಮಿಸಿದ್ದಾರೆ. ಹೀಗಾಗಿ ಪತ್ರಕರ್ತರಿಂದು ಶಕ್ತಿಮೀರಿ ಅರಿವಿನೊಂದಿಗೆ ಸಂವಹಿಸಬೇಕಿದೆ.

ಪ್ರತಿಯೊಂದು ರಾಜಕೀಯ ಪಕ್ಷವೂ ವೃತ್ತಿಪರ ನೈಪುಣ್ಯತೆ ಹೊಂದಿರುವ ಇಂಜಿನಿಯರ್ಗಳ ದಂಡನ್ನು ಕಟ್ಟಿಕೊಂಡು ಸುದ್ದಿ ತಯಾರಿಸಿ, ಹರಿಯಬಿಡುತ್ತಿದ್ದಾರೆ. ಹೀಗಾಗಿಯೇ ಸುಳ್ಳು ಸುದ್ದಿ ಸಮಸ್ಯೆಯಾಗಿಯೇ ಉಳಿದಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮ ಬಹಳ ಬೇಗ ತಲುಪುತ್ತಿದೆ. ಜೊತೆಗೆ ಪತ್ರಕರ್ತರ ಸೈದ್ಧಾಂತಿಕ ಪಕ್ಷಪಾತದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಹಾಗೆಯೇ ಪತ್ರಕರ್ತರು ಒಗ್ಗೂಡಲು ಸಹ ನೆರವು ನೀಡುತ್ತದೆ.

ಇನ್ಸ್ ಪೆಕ್ಟರ್. ಬಿ.ಕೆ. ರವಿ ಅವರು ಹೇಳಿದಂತೆ ಕನ್ನಡ ಭಾಷಾ ಮಾಧ್ಯಮದ ಬೆಳವಣಿಗೆಗೆ ಮತ್ತು ಕನ್ನಡ ಭಾಷಾ ಪತ್ರಕರ್ತರ ಅಭಿವೃದ್ಧಿಗೆ ಸರ್ಕಾರ ನೆರವು ನೀಡುವ ಮೂಲಕ ಪ್ರೋತ್ಸಾಹ ನೀಡಲೇಬೇಕಿದೆ. ಕನ್ನಡ ಭಾಷಾ ಮಾಧ್ಯಮ ಎಲ್ಲಾ ರೀತಿಯ ಸಾಮಾಜಿಕ ಅನಿಷ್ಠ, ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದೆ. ಅದು ದೇವದಾಸಿ ಪದ್ಧತಿ ರದ್ದು, ಜೀತ ಪದ್ಧತಿ ರದ್ದು, ಮಲ ಹೋರುವ ಪದ್ಧತಿ ರದ್ದು, ಹಿಂದೀ ಹೇರಿಕೆ ವಿರುದ್ಧ ಹೋರಾಟ, ಬೆತ್ತಲೆ ಸೇವೆ, ಉರುಳು ಸೇವೆ, ಭಾಷಾ ಚಳುವಳಿ ಸೇರಿದಂತೆ ಹಲವು ಬಗೆಯ ಪಿಡುಗುಗಳ ವಿರುದ್ಧ ಧ್ವನಿ ಎತ್ತಿ, ಧ್ವನಿ ನೀಡಿವೆ.

ಇವತ್ತು ಕನ್ನಡ ಭಾಷಾ ಮಾಧ್ಯಮದ ಬೆಳವಣಿಗೆ ಅತ್ಯಂತ ಅಗತ್ಯವಾಗಿದೆ. ಕಾರಣ, ಇಂಗ್ಲಿಷ್ ಮಾಧ್ಯಮವನ್ನು ಗುಣಮಟ್ಟ ಮತ್ತು ಜಾತಿ ಪ್ರಾತಿನಿಧ್ಯ ಎರಡೂ ಪಿಡುಗಿನಂತೆ ಕಾಡುತ್ತಿದೆ. ನಮ್ಮ ನಾಡಿನ ವಿಶಿಷ್ಟ ಸಂಕೀರ್ಣ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಇಂಗ್ಲಿಷ ಮಾಧ್ಯಮ ವಿಫಲವಾಗಿದೆ ಎಂದೇ ಹೇಳಬಹುದು. ಇಲ್ಲಿ ಕಾರ್ಯನಿರ್ವಹಿಸುವವರಿಗೆ ಮತ್ತು ಸುದ್ದಿ ನಿರ್ಣಯಿಸುವ ಸ್ಥಳದಲ್ಲಿ ವಿರಾಜಮಾನರಾದವರಿಗೆ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಬುಡಕಟ್ಟು ಜನರ, ರೈತರ ಸಂವೇದನೆಗಳ ಅರಿವು ಇರುವುದಿಲ್ಲ.

ಇನ್ನೂ ಜಾತೀಯತೆ ಕುರಿತು ವರದಿ ಮಾಡುವಾಗ ಕರ್ತವ್ಯ ಅಥವಾ ವ್ಯವಹಾರ ಎಂಬಂತೆ ಭಾವಿಸಿ ಬರೆಯುತ್ತಾರೆ. ಇಂತಹ ಬರಹಗಳು ಓದುಗರನ್ನು ಮತ್ತು ವಸ್ತು-ವಿಷಯ ಎರಡನ್ನೂ ಶಬ್ದಾಡಂಬರದ ಮೂಲಕ ಶೈಕ್ಷಣಿಕ ವ್ಯಾಪ್ತಿಗೆ ತಂದು ವಿಷಯಾಂತರಗೊಳಿಸಿರುತ್ತಾರೆ. ಹೀಗಾಗಿ ಇದೊಂದು ಕಗ್ಗವಾಗಿ ಭಾಸವಾಗುತ್ತದೆಯೇ ಹೊರತು ಸಮಸ್ಯೆಗಳನ್ನು ಅನಾವರಣಗೊಳಿಸುವುದಿಲ್ಲ.