ಕೊಟ್ಟಿಗೆಹಾರ: ಕಳೆದ ಮಳೆಗಾಲದಲ್ಲಿ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿತವಾಗಿದ್ದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದು ಹೋಗಿದ್ದು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಸೇತುವೆ ಕುಸಿದ ಪರಿಣಾಮ ಕೂಡಳ್ಳಿ, ಬಂಕೇನಹಳ್ಳಿ, ಚೇಗು ಮುಂತಾದ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು ಮಳೆಗಾಲದ ಪ್ರಾರಂಭದಲ್ಲೆ ಸೇತುವೆ ಕುಸಿದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಶನಿವಾರ ರಾತ್ರಿ ಸುರಿದ ಮಳೆಗೆ ಸೇತುವೆ ಕುಸಿತವಾಗಿದ್ದು ಸಂಪರ್ಕ ಸಾದ್ಯವಾಗದೇ ಇರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
ಗ್ರಾಮಸ್ಥ ಬಿ.ಆರ್ ಭರತ್ ಮಾತನಾಡಿ ಸೇತುವೆ ಕುಸಿದು ವರ್ಷ ಕಳೆದರೂ ನೂತನ ಸೇತುವೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ತಾತ್ಕಾಲಿಕವಾಗಿ ಕಟ್ಟಿದ ಸೇತುವೆಯೂ ಮಳೆಗಾಲದ ಪ್ರಾರಂಭದಲ್ಲೆ ಕುಸಿದಿರುವುದು ತುರ್ತು ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಂಪರ್ಕ ಸಾಧ್ಯವಾಗದಂತಾಗಿದೆ. ದಿನನಿತ್ಯ ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು, ಕಾರ್ಮಿಕರು ಜೀವದ ಹಂಗು ತೊರೆದು ಕುಸಿದ ಸೇತುವೆ ದಾಟಿ ಹೋಗಬೇಕಾಗಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೂಡಿಗೆರೆ ತಹಶೀಲ್ದಾರ್ ರಮೇಶ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವಳ ಬಳಿ ಮಾತನಾಡಿದ್ದು ಶೀಗ್ರವಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.










