ಪದವಿ ಪಡೆದರೆ ಯುವನಿಧಿ ಕೊಡಬೇಕು ಎಂಬ ಕಾರಣಕ್ಕೆ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿದೆ: ಆರ್ ಅಶೋಕ್.

25

ಬೆಂಗಳೂರು: ಯುವಕರು ಪದವಿ ಪಡೆದರೆ ಯುವನಿಧಿ ಕೊಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ 8 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಭಾರೀ ಖತರ್ನಾಕ್‍ಗಳು. ಮೊದಲು ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚುತ್ತಿದ್ದಾರೆ. ಮಂಡ್ಯ ಗಂಡು ನಾಡು. ಅಲ್ಲೇ ವಿಶ್ವವಿದ್ಯಾಲಯಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ ಕೊಡುತ್ತಿದೆ. ಮಾರಿ ಕಣ್ಣು ಹೋರಿ ಮೇಲೆ ಅನ್ನುವಂತೆ ಸಿದ್ದರಾಮಯ್ಯ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಕೆಆರ್‍ಎಸ್ ಪಕ್ಕ ಅಮ್ಯೂಸ್ಮೆಂಟ್ ಪಾರ್ಕ್ ಮಾಡುತ್ತಾರಂತೆ. ಇದಕ್ಕೆ 1000 ಸಾವಿರ ಕೋಟಿ ರೂ. ಕೊಡುತ್ತಿದ್ದಾರೆ. ಜಲಕ್ರೀಡೆಗೆ ಹಣ ನೀಡುತ್ತಾರೆ ಆದರೆ ವಿಶ್ವವಿದ್ಯಾಲಯ ಮುಚ್ಚಿಸುತ್ತಾರೆ. ಈ ಕಾಂಗ್ರೆಸ್‍ನವರು ಅಪರೂಪದ ಪೀಸ್‍ಗಳು ಎಂದು ವಾಗ್ದಾಳಿ ನಡೆಸಿದರು. ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉಪನ್ಯಾಸಕರ ನೇಮಕ ಆಗಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ಇಲ್ಲ. ಶಾಲೆ ಕಾಲೇಜು ಕಟ್ಟಡಗಳ ದುರಸ್ತಿ ಇಲ್ಲ ಪಠ್ಯಪುಸ್ತಕ, ಸಮಸವಸ್ತ್ರ ಕೊಡಲು ಕಾಸಿಲ್ಲ, ಮನಸಿಲ್ಲ. ಕೆಪಿಎಸ್‍ಸಿಯಲ್ಲಿ ತಪ್ಪಿಲ್ಲದೇ ಸರಿಯಾಗಿರುವ ಪ್ರಶ್ನೆ ಪತ್ರಿಕೆ ಕೊಡುವ ಯೋಗ್ಯತೆ ಇಲ್ಲ. ಈಗ 4 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈ ಬಜೆಟ್‍ನಲ್ಲಿ ವಿಶ್ವವಿದ್ಯಾಲಯಗಳಿಗೆ ಕೇವಲ 342 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.