ಪರಿಷತ್ ಚುನಾವಣೆ : ಬಿ.ವೈ.ವಿಜಯೇಂದ್ರಗೆ ತಪ್ಪಿದ ಟಿಕೆಟ್.

75
firstsuddi

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿದ್ದು, ಕುಟುಂಬ ರಾಜಕಾರಣಕ್ಕೆ ಪಕ್ಷ ಮನ್ನಣೆ ಹಾಕುವುದಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ.

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಪರಿಷತ್ ಟಿಕೆಟ್ ದೊರೆತಿದೆ. ಮಹಿಳಾ ಕೋಟದಡಿಯಲ್ಲಿ ಕೊಪ್ಪಳ ಮೂಲದ ಲಂಬಾಣಿ ಸಮುದಾಯದ ಹೇಮಲತಾ ನಾಯಕ್, ಹಿಂದುಳಿದ ವರ್ಗ ಕೋಟಾದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್, ದಲಿತರ ಕೋಟದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.

ಇದೇ ವೇಳೆ ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಮಾಜಿ ಸಭಾಪತಿ ಬಸವರಾಜ್‌ ಹೊರಟ್ಟಿಗೆ ಟಿಕೆಟ್‌ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಹಾಗಾಗಿ ವಿಜಯೇಂದ್ರ ಅವರಿಗೆ ಸ್ಥಾನ ನೀಡಬೇಕೇ ಅಥವಾ ಬೇಡವಾ ಎಂಬುದರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಕೊನೆಗೆ ಅಳೆದು ತೂಗಿ ಬಿಜೆಪಿ ನಾಲ್ವರಿಗೆ ಟಿಕೆಟ್ ನೀಡಿದೆ.

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ನಿನ್ನೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಆದ್ರೆ ಜೆಡಿಎಸ್ ಇದುವರೆಗೂ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ.

ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಘೋಷಣೆ : ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಇಬ್ಬರು ಅಚ್ಚರಿಯ ಅಭ್ಯರ್ಥಿಗಳ ಆಯ್ಕೆ ಆಗಿದೆ. ಬಿಎಂಟಿಸಿ ಮಾಜಿ ಅಧ್ಯಕ್ಷ ನಾಗರಾಜ್ ಯಾದವ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.