ಪರ್ಯಾಯ ಅವಧಿಯಲ್ಲಿ ನಿತ್ಯ ಸಹಸ್ರ ತುಳಸಿ ಅರ್ಚನೆ : ವಿದ್ಯಾಸಾಗರತೀರ್ಥ ಸ್ವಾಮೀಜಿ ಘೋಷಣೆ…

72
firstsuddi

ಉಡುಪಿ : ಮುಂದಿನ ಎರಡು ವರ್ಷದ ಪರ್ಯಾಯ ಅವಧಿಯಲ್ಲಿ ನಿತ್ಯ ಸಹಸ್ರ ತುಳಸಿ ಅರ್ಚನೆ, ಹಗಲಿನ ಅವಧಿಯಲ್ಲಿ ಭಜನೆ ಕಾರ್ಯ ನಡೆಯಲಿದೆ. ನಿಮ್ಮೆಲ್ಲರ ಸಹಕಾರದಿಂದ ಹಾಗೂ ದೇವರ ಸಂಕಲ್ಪದಿಂದ ಇವೆಲ್ಲವೂ ಈಡೇರಬೇಕು ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಅವರು ಹೇಳಿದರು.

ಕೃಷ್ಣಾಪುರ ಪರ್ಯಾಯೋತ್ಸವ ಅಂಗವಾಗಿ ಇಂದು ಮುಂಜಾನೆ ಇಲ್ಲಿನ ರಾಜಾಂಗಣದಲ್ಲಿ ನಡೆದ ದರ್ಬಾರ್ ನಲ್ಲಿ ಆಶೀರ್ವಚನ ನೀಡಿದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಇಷ್ಟೊಂದು ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಮಠದ ಮೇಲೆ ವಿಶ್ವಾಸವಿಟ್ಟು ಎಲ್ಲರೂ ಆಗಮಿಸಿ ಪರ್ಯಾಯೋತ್ಸವದ ಮೆರುಗು ಹೆಚ್ಚಿಸಿದ್ದೀರಿ. ನಿಮಗೆಲ್ಲರಿಗೂ ಶ್ರೇಯಸ್ಸಾಗಲಿ. ಗುರಿಗಳನ್ನು ನಂಬಿಕೊಂಡು ಬಂದಿದ್ದೇನೆ. ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುವ ಶಕ್ತಿಯನ್ನು ದೇವರು ನನಗೆ ನೀಡಲಿ ಎಂದು ಪ್ರಾರ್ಥಿಸಿದರು.

ಪ್ರತಿದಿನ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇನೆ. ನನ್ನ ಕೈಲಾದಷ್ಟು ತುಳಸಿ ದಳಗಳನ್ನು ಶ್ರೀಕೃಷ್ಣನಿಗೆ ಅರ್ಪಿಸುತ್ತೇನೆ. ಪಲಿಮಾರು ಸ್ವಾಮೀಜಿಗಳು ಮಾಡಿದಷ್ಟು ದೇವರ ಸೇವೆ ಮಾಡಲು ಸಾಧ್ಯ ಆಗದಿದ್ದರೂ ನನ್ನ ಕೈಲಾದಷ್ಟು ಮಾಡುತ್ತೇನೆ ಎಂದರು.

ಪರ್ಯಾಯ ನಿರ್ಗಮನ ಯತಿ ಅದಮಾರು ಶ್ರೀ ಈಶಪ್ರಿಯತೀರ್ಥರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು, ಪೇಜಾವರ ಶ್ರೀ ವಿಶ್ವಪ್ರಿಯತೀರ್ಥರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥರು, ಶಿರೂರು ಶ್ರೀ ವೇದವರ್ಧನತೀರ್ಥರು ದರ್ಬಾರ್ ನಲ್ಲಿ ಭಾಗವಹಿಸಿದ್ದರು.