ಮೈಸೂರು : ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿ ನಕ್ಸಲರೊಂದಿಗೆ ನಂಟು ಹೊಂದಿರುವುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ ಯುವತಿಗೆ ತಕ್ಕ ಶಿಕ್ಷೆ ಆಗಲೇಬೇಕು. ನಾನು ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಆಕೆಯ ರಕ್ಷಣೆಗೆ ಮುಂದಾಗುವುದಿಲ್ಲ ಎಂದು ಯುವತಿಯ ತಂದೆಯೇ ಹೇಳಿದ್ದಾರೆ. ಅಲ್ಲದೇ ಅಮೂಲ್ಯ ನಕ್ಸಲರೊಂದಿಗೆ ನಂಟು ಹೊಂದಿರುವುದು ಸಾಬೀತಾಗಿದ್ದು, ಅಮೂಲ್ಯರಂತಹ ಯುವತಿಯರನ್ನು ಬೆಳೆಸುತ್ತಿರುವ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಇದು ಎಂದಿಗೂ ಕೊನೆಯಾಗುವುದಿಲ್ಲ. ಈ ಕುರಿತು ತನಿಖೆ ನಡೆಸಿ ಈ ಪ್ರಕರಣದಲ್ಲಿ ಯಾರೆಲ್ಲಾ ಕೈಜೋಡಿಸಿದ್ದಾರೆ ಎಂದು ತಿಳಿದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.










