ಪಿಎಂ ನಿವಾಸದ ಮುಂದೆ ಎಲ್ಲ ಧರ್ಮಗಳ ಪ್ರಾರ್ಥನೆಗೆ ಅವಕಾಶ ಕೊಡಿ : ಅಮಿತ್ ಶಾಗೆ ಎನ್‍ಸಿಪಿ ನಾಯಕಿ ಪತ್ರ…

59
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಎಲ್ಲ ಧರ್ಮಗಳ ಗ್ರಂಥಗಳನ್ನು ಪಠಿಸಲು ಅನುಮತಿ ನೀಡಿ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‍ಸಿಪಿ) ಹಿರಿಯ ನಾಯಕಿ ಫಹ್ಮಿದಾ ಹಸನ್ ಖಾನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಫಹ್ಮಿದಾ ಹಸನ್ ಖಾನ್ ಅವರು, ಗೌರವಾನ್ವಿತ ನರೇಂದ್ರ ಮೋದಿ ಜೀ ಅವರ ನಿವಾಸದ ಹೊರಗೆ ನಮಾಜ್, ಹನುಮಾನ್ ಚಾಲೀಸಾ, ನವಕರ್ ಮಂತ್ರ, ಗುರು ಗ್ರಂಥ ಓದಲು ನನಗೆ ಅವಕಾಶ ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಗೃಹ ಸಚಿವ ಶಾಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ರವಿ ರಾಣಾ ಮತ್ತು ನವನೀತ್ ರಾಣಾ ಅವರು ಮಾತೋಶ್ರೀ(ಉದ್ಧವ್ ಠಾಕ್ರೆ ಅವರ ನಿವಾಸ) ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಓದಿ ಪ್ರಯೋಜನ ಪಡೆಯುತ್ತಾರೆ ಎಂದರೆ ನಮಗೂ ಆ ಅವಕಾಶ ನೀಡಬೇಕು. ದೆಹಲಿಯಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ನಮಾಜ್, ಹನುಮಾನ್ ಚಾಲೀಸಾ ಮತ್ತು ದುರ್ಗಾ ಚಾಲೀಸಾವನ್ನು ಪಠಿಸಲು ಅವಕಾಶ ನೀಡಬೇಕು. ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡಲು ಹಿಂದುತ್ವ, ಜೈನ ಧರ್ಮ ದೇಶಕ್ಕೆ ಅನುಕೂಲವಾದರೆ, ನಾನು ಅದನ್ನು ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ಯತ್ನಿಸಿದರು. ಈ ಹಿನ್ನೆಲೆ ಅವರನ್ನು ಪೊಲೀಸರು ಬಂಧಿಸಿದ್ದು, ಮುಂಬೈ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.